ಜೆಡಿಎಸ್ ವಿರುದ್ಧ ಮುನಿಸಿಕೊಂಡು ಬಿಎಸ್ಪಿ ಸೇರಿ ಮರಳಿ ಜೆಡಿಎಸ್ ಸೇರ್ಪಡೆಗೊಂಡಿದ್ದ ಮಾಜಿ ಸಚಿವ ಡಿ.ಟಿ.ಜಯಕುಮಾರ್ ಅವರು ಮಹತ್ವದ ಬೆಳವಣಿಗೆ ಎಂಬಂತೆ ಶನಿವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಪಾಳಯಕ್ಕೆ ಜಿಗಿದಿದ್ದಾರೆ.ಆಪರೇಶನ್ ಕಮಲದ ಮುಂದುವರಿದ ಭಾಗವಾಗಿ ಜೆಡಿಎಸ್‌ನ ಡಿ.ಟಿ.ಜೆ ಅವರು ಯಡಿಯೂರಪ್ಪ ಅವರ ನಿವಾಸದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಪಕ್ಷದ ಹಿರಿಯ ಮುಖಂಡ ಅನಂತಕುಮಾರ್ ಅವರು ಡಿಟಿಜೆಯನ್ನು ಪಕ್ಷಕ್ಕೆ ಬರಮಾಡಿಕೊಂಡರು.ಬಿಜೆಪಿ ಸೇರ್ಪಡೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಟಿ, ಕಳೆದ 30ವರ್ಷಗಳಿಂದ ಜೆಡಿಎಸ್‌ನಲ್ಲಿ ಪ್ರಾಮಾಣಿಕವಾಗಿ ದುಡಿದಿದ್ದೇನೆ, ಅಲ್ಲಿ ಸಾಕಷ್ಟು ನೊಂದು, ಬೆಂದು ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದೇನೆ ಎಂದ ಅವರು, ಯಾವುದೇ ಸ್ಥಾನಮಾನದ ಆಕಾಂಕ್ಷಿಯಿಂದ ಬಿಜೆಪಿಗೆ ಸೇರಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.ಕಳೆದ ಮೇ ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ದೊರೆಯಲಿಲ್ಲ ಎನ್ನವ ಕಾರಣದಿಂದ ದೇವೇಗೌಡರೊಂದಿಗೆ ಮುನಿಸಿಕೊಂಡು ಪಕ್ಷ ತ್ಯಜಿಸಿದ್ದ ಮಾಜಿ ಸಚಿವ ಡಿ ಟಿ ಜಯಕುಮಾರ್ ಇತ್ತೀಚೆಗಷ್ಟೇ ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದರು.ಕಳೆದ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಚಿಕ್ಕ ಮನಸ್ತಾಪ ಆಗಿದ್ದು ನಿಜ ಎಂದು ಒಪ್ಪಿಕೊಂಡ ದೇವೇಗೌಡ, ತಪ್ಪನ್ನು ಮನಸ್ಸಿನಲ್ಲಿಟ್ಟುಕೊಂಡು ಜಯಕುಮಾರ್ ಪಕ್ಷದಿಂದ ಹೊರಕ್ಕೆ ಹೋಗಿದ್ದರು. ಆದರೆ ಇದೀಗ ಮತ್ತೆ ಪಕ್ಷಕ್ಕೆ ಮರಳುವ ನಿರ್ಧಾರ ಕೈಗೊಂಡಿದ್ದು ಉತ್ತಮ ನಿರ್ಧಾರವಾಗಿದೆ. ಹಿರಿಯ ನಾಯಕರಾಗಿರುವ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದ್ದರು. ಡಿ ಟಿ ಜಯಕುಮಾರ್ ಜೆಡಿಎಸ್ ತೊರೆದು ಬಿಎಸ್ಪಿ ಸೇರ್ಪಡೆಯಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನನುಭವಿಸಿದ್ದರು. |