ತಾನು ಮುಖ್ಯಮಂತ್ರಿ ಆಕಾಂಕ್ಷಿಯಲ್ಲ ಎಂದು ಗ್ರಾಮೀಣಾಭಿವೃದ್ದಿ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಪದಚ್ಯುತಿ ಆಗುತ್ತಾರೆ ಎನ್ನುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಅರ್ಥಹೀನ ಎಂದರು.
"ಅಂತಹ ಆಸೆಗಳನ್ನು ಕುಮಾರಸ್ವಾಮಿ ಇಟ್ಟುಕೊಳ್ಳುವುದು ಬೇಡ. ಎಲ್ಲ ಶಾಸಕರ ಬೆಂಬಲ ಯಡಿಯೂರಪ್ಪನವರಿಗೆ ಇದೆ. ತಾವು ಮತ್ತು ಯಡಿಯೂರಪ್ಪ ಕುಮಾರಸ್ವಾಮಿ ಬಳಿಗೆ ಹೋಗಿದ್ದರಿಂದ ಅವರು ಮುಖ್ಯಮಂತ್ರಿಯಾಗಿದ್ದರು ಎನ್ನುವುದು ಅವರಿಗೆ ನೆನಪಿರಲಿ" ಎಂದು ತಿರುಗೇಟು ನೀಡಿದರು.
ಸಚಿವರ ಖಾತೆಗಳಲ್ಲಿ ಮುಖ್ಯಮಂತ್ರಿಗಳು ಹಸ್ತಕ್ಷೇಪ ಮಾಡುತ್ತಾರೆ ಎನ್ನುವ ಆರೋಪ ಸರಿಯಲ್ಲ. ಸಮನ್ವಯದಿಂದ ಕೆಲಸ ಸಾಗಿದೆ. ಬಿಜೆಪಿ ತನ್ನದೇ ಪ್ರಣಾಳಿಕೆ, ಸಿದ್ಧಾಂತ ಹೊಂದಿದ್ದು ಅದಕ್ಕೆ ಅನುಗುಣವಾಗಿ ಕೆಲಸ ನಿರ್ವಹಿಸುತ್ತದೆ. ಆರ್ಎಸ್ಎಸ್ ತಾಯಿ ಬೇರು ಇದ್ದಂತೆ. ಹಿಂದುತ್ವ ಹಾಗೂ ರಾಮಮಂದಿರ ವಿಚಾರದಿಂದ ಪಕ್ಷ ದೂರ ಉಳಿಯುವುದಿಲ್ಲ" ಎಂದು ಶೋಭಾ ಸ್ಪಷ್ಟಪಡಿಸಿದರು.
|