ಚುನಾವಣಾ ವೆಚ್ಚಕ್ಕಾಗಿ ಬಿಜೆಪಿ ಮದ್ಯದಂಗಡಿಗಳಿಂದ ಸುಮಾರು 28 ಕೋಟಿ ರೂ.ಗಳ ಹಫ್ತಾ ಸಂಗ್ರಹಿಸಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ಯದಂಗಡಿ ಪರವಾನಿಗೆ ನವೀಕರಣ ಚುನಾವಣೆ ನಂತರ ಮಾಡಿಕೊಡುವುದಾಗಿ ಭರವಸೆ ನೀಡಿ ಹಫ್ತಾ ವಸೂಲಿ ಮಾಡಿದೆ ಎಂದು ತಿಳಿಸಿದರು.
ರಾಜ್ಯದಲ್ಲಿನ 2,800 ಮದ್ಯದಂಗಡಿಗಳಿಂದ ತಲಾ 1 ಲಕ್ಷ ರೂ.ಗಳಂತೆ ಒಟ್ಟು 28 ಕೋಟಿ ರೂ.ಗಳು ಸಂಗ್ರಹವಾಗಿದೆ. ಈ ರೀತಿಯಲ್ಲಿ ಬೇರೆ ಬೇರೆ ಕಡೆಯಿಂದಲೂ ಸಂಗ್ರಹಿಸಿರುವ ಅಕ್ರಮ ಹಣವನ್ನು ಗೋಲ್ಡನ್ ಚಾರಿಯಟ್‌ನ್ನು ಉಪಯೋಗ ಮಾಡಿಕೊಂಡಿಕೊಂಡಿರುವುದಾಗಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು ಅಭಿವೃದ್ದಿಗೆ 9.5 ಸಾವಿರ ಕೋಟಿ ರೂ. ವ್ಯಯ ಮಾಡಿರುವುದಾಗಿ ಕಳ್ಳ-ಮಳ್ಳರಂತಹ ಇಬ್ಬರು ಸಚಿವರು ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿಗೆ ಯಾವ ಹೊಸ ಯೋಜನೆ ರೂಪಿಸಿದೆ ಎಂಬುದನ್ನು ಬಹಿರಂಗಪಡಿಸಲಿ ಸಾಕು ಎಂದು ಸವಾಲು ಹಾಕಿದರು.
ಈ ಸರ್ಕಾರದಿಂದ ಬೆಂಗಳೂರಿನ ಅಭಿವೃದ್ದಿ ಏನಾಗಿದೆ ? ಎಷ್ಟಾಗಿದೆ? ಎಂಬ ಬಗ್ಗೆ ಸಾರ್ವಜನಿಕ ಚರ್ಚೆಯಾಗಲಿ. ಸುದ್ದಿಗೋಷ್ಠಿಯಲ್ಲಿ ಕೊಚ್ಚಿಕೊಂಡಿರುವ ಕಳ್ಳ-ಮಳ್ಳರಿಬ್ಬರು ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಎಂದು ಸಚಿವರಾದ ಕಟ್ಟಾ ಸುಬ್ರಮಣ್ಯನಾಯ್ಡು ಮತ್ತು ಅಶೋಕ್ ಅವರ ಹೆಸರು ಹೇಳದೇ ಪಂಥಾಹ್ವಾನ ನೀಡಿದರು.
|