ಮದ್ಯದಂಗಡಿಗಳಿಂದ ಬಿಜೆಪಿ ಸರ್ಕಾರ ಹಣ ವಸೂಲಿ ಮಾಡಿದೆ ಎನ್ನುವ ಸುಳ್ಳು ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾರ್ವಜನಿಕವಾಗಿ ಕ್ಷಮೆ ಕೋರಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಸೋಮವಾರ ರೋಡ್ ಶೋ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಟ್ಟು, ಆರೋಪಗಳಿಗೆ ಸಾಕ್ಷ್ಯ ಒದಗಿಸಲಿ, ಇಲ್ಲವಾದರೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದರು.
ಕುಮಾರಸ್ವಾಮಿಯವರ ಹೇಳಿಕೆ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ರಾಜ್ಯದ ಹಣಕಾಸಿನ ಪರಿಸ್ಥಿತಿ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಹಣಕಾಸು ಪರಿಸ್ಥಿತಿ ಉತ್ತಮವಾಗಿದೆ, ಯೋಜನಾ ವೆಚ್ಚಗಳಲ್ಲಿ ಶೇಕಡ 20ರಷ್ಟು ಹೆಚ್ಚು ಹಣ ಖರ್ಚು ಮಾಡಲಾಗಿದೆ ಎಂದರು. |