ರಾಜ್ಯದಲ್ಲಿ ಹಲವು ಯೋಜನೆಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ. ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು ಕೂಡಲೇ ಶ್ವೇತಪತ್ರ ಹೊರಡಿಸಬೇಕೆಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರತಿಪಕ್ಷಗಳ ಮೇಲೆ ದೋಷಾರೋಪಣೆ ಮಾಡುವುದನ್ನು ಬಿಟ್ಟು ಕೂಡಲೇ ಹಣಕಾಸು ಪರಿಸ್ಥಿತಿ ಏನು ಎಂಬುದನ್ನು ರಾಜ್ಯದ ಜನತೆಗೆ ವಿವರಿಸಬೇಕು ಎಂದು ಒತ್ತಾಯಿಸಿದರು.
ಅನೇಕ ಕಾಮಗಾರಿಗಳ ಬಿಲ್‌ಗಳನ್ನು ನೀಡಲು ಎಲ್ಓಸಿಗಳು ಬಿಡುಗಡೆಯಾಗುತ್ತಿಲ್ಲ. ಇದುವರೆಗೂ ಬರೀ ಚುನಾವಣಾ ನೀತಿ ಸಂಹಿತೆಯ ನೆಪ ಹೇಳಿಕೊಂಡೇ ಸರ್ಕಾರ ಕಾಲ ಕಳೆದಿದೆ. ಬಜೆಟ್ ಕಾರ್ಯಕ್ರಮಗಳ ಜಾರಿಗೆ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ. ಆದರೂ ಸರ್ಕಾರ ಚಾಲ್ತಿಯಲ್ಲಿನ ನೀರಾವರಿ ಸೇರಿದಂತೆ ಯಾವುದೇ ಯೋಜನೆಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಚುನಾವಣೆ ಮುಗಿದು 15 ದಿನಗಳಾಗಿದ್ದರೂ ರಾಜ್ಯ ಸರ್ಕಾರಕ್ಕೆ ಮಾತ್ರ ಅಭಿವೃದ್ದಿ ಯೋಜನೆಗಳ ಕುರಿತು ಕಿಂಚಿತ್ತೂ ಕಾಳಜಿ ಇಲ್ಲ. ಯಾವುದೇ ಇಲಾಖೆಯಲ್ಲಿ ಅಧಿಕಾರಿಗಳನ್ನು ಕೇಳಿದರೂ ಹಣ ಇಲ್ಲ ಎಂಬ ಮಾತನ್ನು ಹೇಳುತ್ತಿದ್ದಾರೆ ಎಂದು ಖರ್ಗೆ ದೂರಿದರು.
ಗಣಿಗಾರಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶಕ್ಕೂ ಮುಖ್ಯಮಂತ್ರಿಗಳು ಗೌರವ ನೀಡದೆ ಮೌನವಾಗಿರುವುದಾದರೂ ಏಕೆ ಎಂದು ಖರ್ಗೆ ಕಿಡಿಕಾರಿದರು.
ರಾಜ್ಯದ ಗಡಿ ಒತ್ತುವರಿಯಾಗಿರುವ ಬಗ್ಗೆ ಕಾಂಗ್ರೆಸ್ ಪಕ್ಷ ಪ್ರಾಮಾಣಿಕವಾಗಿ ರಾಜ್ಯಪಾಲರಿಗೆ ಮತ್ತು ಸರ್ಕಾರಕ್ಕೆ ಮನವಿ ಮಾಡಿ ಜಂಟಿ ಸರ್ವೆಗೆ ಒತ್ತಾಯ ಮಾಡಿದೆ. ಆದರೂ ಸರ್ವೆ ಆಗುತ್ತಿಲ್ಲ ಎಂದರು. |