ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ರಾತ್ರಿ ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಕಟುವಾಗಿ ಲೇವಡಿ ಮಾಡಿದ್ದಾರೆ.
ಜೆಡಿಎಸ್ ಮತ್ತೊಮ್ಮೆ ವಚನ ಭ್ರಷ್ಟತೆಗೆ ಸಿದ್ದತೆ ನಡೆಸುತ್ತಿದೆ ಎಂದು ವ್ಯಂಗ್ಯವಾಡಿದ ಅವರು, ಆ ನಿಟ್ಟಿನಲ್ಲಿ ತೃತೀಯ ರಂಗ ಅಸ್ತಿತ್ವದಲ್ಲಿ ಇಲ್ಲ ಎಂಬದು ಸಾಬೀತಾದಂತಾಗಿದೆ ಎಂದು ಹೇಳಿದರು.
ಬುಧವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೌಡರು, ನಿನ್ನೆ ರಾತ್ರಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಕುರಿತು ಕೇಳಿದ ಪ್ರಶ್ನೆಗೆ ಜೆಡಿಎಸ್‌ಗೆ ತಿರುಗೇಟು ನೀಡಿದ ಪರಿ ಇದು.
ರಾಷ್ಟ್ರಮಟ್ಟದಲ್ಲಿ ತೃತೀಯರಂಗ ಎಂದು ಬೊಬ್ಬೆ ಹೊಡೆಯುತ್ತಿರುವ ಮಾಜಿ ಪ್ರಧಾನಿ ದೇವೇಗೌಡರು, ಇದೀಗ ಫಲಿತಾಂಶಕ್ಕೂ ಮುನ್ನ ರಾಜಿ ಸಂಧಾನಕ್ಕಾಗಿ ದೇವೇಗೌಡರೇ ಸ್ವತಃ ಪುತ್ರನನ್ನು ಕಾಂಗ್ರೆಸ್ ವರಿಷ್ಠೆ ಬಳಿ ಕಳುಹಿಸಿರುವುದಾಗಿ ಕುಹಕವಾಡಿದರು. ಕಾಂಗ್ರೆಸ್ ಜತೆ ಹೊಂದಾಣಿಕೆ ಇಲ್ಲ ಎಂದು ಬಹಿರಂಗಸಭೆಯಲ್ಲಿ ಗೌಡರು ಘೋಷಿಸಿದ್ದರು. ಅಲ್ಲದೇ ಸೋನಿಯಾಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಕೂಡ ನಡೆಸಿದ್ದರು.
ಒಂದೆಡೆ ಎಡಪಕ್ಷಗಳು ಕಾಂಗ್ರೆಸ್ ಜತೆ ಸಖ್ಯ ಇಲ್ಲ ಎನ್ನುತ್ತವೆ, ಮತ್ತೊಂದೆಡೆ ತೃತೀಯರಂಗ ಬಲಶಾಲಿಯಾಗಿದೆ ಎನ್ನುವ ಗೌಡರು, ಏಕಾಏಕಿ ದೆಹಲಿಯಲ್ಲಿ ಮೇಡಂ ಮನೆಬಾಗಿಲು ಬಡಿದಿರುವುದು ಏನನ್ನು ಸಾಬೀತು ಪಡಿಸುತ್ತೆ ಎಂದು ಪ್ರಶ್ನಿಸಿದರು. ಈ ಮೊದಲೇ ನಾವು ಹೇಳುತ್ತ ಬಂದಿದ್ದೇವೆ, ಜೆಡಿಎಸ್ ವಚನಭ್ರಷ್ಟ ಪಕ್ಷ ಎಂದು, ಇದೀಗ ಮತ್ತೆ ತಮ್ಮ ಕೀಳುಮಟ್ಟದ ಬುದ್ದಿಯನ್ನು ಬಹಿರಂಗವಾಗಿ ಪ್ರದರ್ಶಿಸಿವೆ ಎಂದು ಅವರು ಕುಹಕವಾಡಿದರು.
ಒಟ್ಟಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಲೋಕಸಭೆ ಫಲಿತಾಂಶಕ್ಕೂ ಮುನ್ನ ಭಯಭೀತಗೊಂಡಿವೆ ಎನ್ನುವುದು ಸ್ಪಷ್ಟವಾಗಿದೆ ಎಂದ ಗೌಡರು, ಕಾಂಗ್ರೆಸ್ ಕೂಡ ಸಣ್ಣ-ಪುಟ್ಟ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವತ್ತ ವ್ಯವಹಾರ ನಡೆಸುತ್ತಿದೆ ಎಂದು ಟೀಕಿಸಿದರು. |