ಕಾಂಗ್ರೆಸ್ ವರಿಷ್ಠೆ ಸೋನಿಯ ಗಾಂಧಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭೇಟಿಗೆ ಹೆಚ್ಚಿನ ಅರ್ಥ ಕಲ್ಪಿಸುವುದು ಬೇಡ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ಪಷ್ಟನೆ ನೀಡಿದ್ದು, ಕುಮಾರಸ್ವಾಮಿ ದೆಹಲಿಗೆ ತೆರಳಿ ಸೋನಿಯಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಅಂಶ ತನಗೆ ಗೊತ್ತಿಲ್ಲ ಎಂದು ಅಚ್ಚರಿ ಹುಟ್ಟಿಸಿದರು!ನಾನು ಕೂಡ ಮಾಧ್ಯಮಗಳ ವರದಿ ನೋಡಿಯೇ ಕುಮಾರಸ್ವಾಮಿಯನ್ನು ಸಂಪರ್ಕಿಸಿ ಮಾತುಕತೆಯ ವಿವರ ಪಡೆದಿರುವುದಾಗಿಯೂ ಈ ಸಂದರ್ಭದಲ್ಲಿ ಹೇಳಿದರು.ಕುಮಾರಸ್ವಾಮಿ ಮತ್ತು ಸೋನಿಯ ಗಾಂಧಿ ಭೇಟಿ ಕುರಿತಂತೆ ರಾಜಕೀಯ ವಲಯದಲ್ಲಿ ಎದ್ದಿರುವ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಪದ್ಮನಾಭ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೃತೀಯರಂಗ ಸದೃಢವಾಗಿಯೇ ಇದೆ. ಅಲ್ಲದೇ ತೃತೀಯರಂಗಕ್ಕೆ ಎಳ್ಳುನೀರು ಬಿಟ್ಟಿಲ್ಲ ಎಂದು ಸಮಜಾಯಿಷಿಕೆ ನೀಡಿದರು.ಮಂಗಳವಾರ ರಾತ್ರಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಅವರನ್ನು ಭೇಟಿಯಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಟು ಟೀಕೆ ವ್ಯಕ್ತಪಡಿಸಿತ್ತು. ದೇವೇಗೌಡರು ಫಲಿತಾಂಶಕ್ಕೂ ಮುನ್ನ ಮಗನನ್ನು ದೂತನನ್ನಾಗಿ ದೆಹಲಿಗೆ ಕಳುಹಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಲೇವಡಿ ಮಾಡಿದ್ದಕ್ಕೆ ಪ್ರತಿಯಾಗಿ ಗೌಡರು ತರಾತುರಿಯಲ್ಲಿ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದಾರೆ.ತೃತೀಯರಂಗದಲ್ಲಿ ಯಾವುದೇ ಬಿಕ್ಕಟ್ಟಿನ ಪ್ರಶ್ನೆಯೇ ಇಲ್ಲ, ರಾಜ್ಯದ ಸಮರ್ಥ ನಾಯಕರಾಗಿ ಕುಮಾರಸ್ವಾಮಿ ಅವರು ಸೋನಿಯರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರೇ ವಿನಃ ಬೇರೆ ಏನು ಇಲ್ಲ ಎಂದ ಅವರು, ಈ ಬಾರಿ ರಾಷ್ಟ್ರರಾಜ್ಯರಾಜಕಾರಣದಲ್ಲಿ ಜಾತ್ಯತೀತ ಸರ್ಕಾರ ರಚಿಸುವುದೇ ತಮ್ಮ ಗುರಿ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು. |