ಲೋಕಸಭಾ ಚುನಾವಣೆ ಫಲಿತಾಂಶಗಳ ನಂತರ ರಾಜ್ಯ ರಾಜಕಾರಣದಲ್ಲಿ ಆಗುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತಾ ಹೇಳಿದ್ದಾರೆ.
ಸೋನಿಯಾಗಾಂಧಿ ಅವರ ಭೇಟಿಗೆ ಇದು ಸರಿಯಾದ ಸಮಯವಾಗಿತ್ತು. ಅವರು ರಾಜ್ಯ ರಾಜಕಾರಣದ ಬದಲಾವಣೆಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳ ಸೂಚನೆ ಈಗಾಗಲೇ ಸಿಕ್ಕಿದೆ. ಬಿಜೆಪಿಯಲ್ಲಿ ಆಂತರಿಕ ಆಕ್ರೋಶ ಭುಗಿಲೇಳುತ್ತಿರುವುದನ್ನು ನಮ್ಮ ಪಕ್ಷ ಗುರುತಿಸಿದೆ. ಆದ್ದರಿಂದ ಅದರ ಲಾಭ ಪಡೆಯಲು ಜಾತ್ಯತೀತ ಪಕ್ಷವಾದ ಕಾಂಗ್ರೆಸ್‌ನ ಸಹಕಾರವನ್ನು ಕೋರುತ್ತಿದೆ ಎಂದರು.
ಕುಮಾರಸ್ವಾಮಿ ಅವರು ಬಿಜೆಪಿ ಮುಖಂಡರ ಜತೆಗೋ ಅಥವಾ ಎನ್‌ಡಿಎ ಮುಖಂಡರ ಜತೆಗೋ ಚರ್ಚಿಸಿದ್ದರೆ ಗಂಭೀರವಾಗಿ ಪರಿಗಣಿಸಬೇಕಾಗಿತ್ತು. ಆದರೆ ಅವರು ಚರ್ಚಿಸಿರುವುದು ಜಾತ್ಯತೀತ ಪಕ್ಷವಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯ ಗಾಂಧಿ ಜತೆಗೆ ಎಂದು ಹೇಳಿದರು. ಕೋಮುವಾದಿ ಬಿಜೆಪಿಯನ್ನು ನಿಯಂತ್ರಿಸಲು ಜಾತ್ಯತೀತ ಪಕ್ಷಗಳ ಸಹಕಾರ ಅಗತ್ಯವಾಗಿದೆ. ತೃತೀಯ ರಂಗದ ಮಿತ್ರಪಕ್ಷಗಳಾದ ಎಡಪಕ್ಷಗಳು ರಾಜ್ಯದಲ್ಲಿ ಬಲಯುತವಾಗಿಲ್ಲ. ಆದ್ದರಿಂದ ಕಾಂಗ್ರೆಸ್ ನೆರವು ಪಡೆಯುವುದು ಅನಿವಾರ್ಯ ಎಂದು ಹೇಳಿದರು. |