ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಪಾರದರ್ಶಕ ರಾಜಕಾರಣಿಯಾಗಿದ್ದರೆ ನವದೆಹಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿರುವುದರ ಉದ್ದೇಶವನ್ನು ಬಹಿರಂಗಪಡಿಸಲಿ ಎಂದು ಬಿಜೆಪಿ ಅಧ್ಯಕ್ಷ ಡಿ.ವಿ.ಸದಾನಂದ ಗೌಡ ಅವರು ಸವಾಲು ಹಾಕಿದ್ದಾರೆ.
ಸೋನಿಯಾ ಅವರನ್ನು ಭೇಟಿಯಾಗಿ ರಾಜ್ಯದ ಅಭಿವೃದ್ದಿಯ ಬಗ್ಗೆ ಚರ್ಚಿಸಲು ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಲ್ಲ. ವಿರೋಧಪಕ್ಷದ ನಾಯಕನಲ್ಲ ಅಥವಾ ಕಾಂಗ್ರೆಸ್ ಸದಸ್ಯನಲ್ಲ. ಹೀಗಿರುವಾಗ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿರುವುದರ ಉದ್ದೇಶ ಏನು ಎಂಬುದನ್ನು ಕುಮಾರಸ್ವಾಮಿ ಬಹಿರಂಗ ಪಡಿಸಬೇಕು ಎಂದು ಸದಾನಂದ ಗೌಡ ಸುದ್ದಿಗಾರರೊಂದಿಗೆ ಮಾತನಾಡುತ್ತ ಆಗ್ರಹಿಸಿದರು.
ರಾಜ್ಯದ ತೃತೀಯ ರಂಗದ ಸಮಾವೇಶವನ್ನು ಆಯೋಜಿಸಿ ಅದರ ಜತೆಯಲ್ಲೇ ಚುನಾವಣೆ ಎದುರಿಸಿದ್ದ ಜೆಡಿಎಸ್ ಇದೀಗ ತೃತೀಯರಂಗಕ್ಕೆ ಕೈಕೊಟ್ಟು ತನ್ನ ವಚನ ಭ್ರಷ್ಟತೆಯ ಪರಂಪರೆಯನ್ನು ಮುಂದುವರಿಸಿದೆ. ಮುಖ ಮುಚ್ಚಿಕೊಂಡೆ ರಾಜಕಾರಣ ಮಾಡುತ್ತಿರುವ ಎಚ್.ಡಿ. ದೇವೇಗೌಡ ಅವರು ತನ್ನ ಮಗ ಕುಮಾರಸ್ವಾಮಿಯನ್ನು ಕೂಡಾ ಮುಖ ಮುಚ್ಚಿಸಿಕೊಂಡು ಕಾಂಗ್ರೆಸ್ ಸಖ್ಯ ಬಯಸಿ ಸೋನಿಯಾ ಗಾಂಧಿ ಅವರ ಭೇಟಿಗೆ ಕಳುಹಿಸಿದ್ದಾರೆ ಎಂದು ಡಿವಿ ಲೇವಡಿ ಮಾಡಿದರು.
ಚುನಾವಣೆಯ ಫಲಿತಾಂಶ ಬರುವ ಮೊದಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಆತಂಕಕ್ಕೀಡಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಡೆಸುತ್ತಿರುವ ಕಾರ್ಯಗಳೇ ಇದಕ್ಕೆ ಸಾಕ್ಷಿ ಎಂದರು. |