ಲೋಕಸಭಾ ಮತಸಮರದ ಹಣಾಹಣಿಯ ಮುಕ್ತಾಯದ ನಂತರ ಚುನಾವಣಾ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದ್ದು, ಇದೀಗ ಮೇ 16ರಂದು ಬೆಳಿಗ್ಗೆ ಆರಂಭವಾಗುವ ಮತಎಣಿಕೆ ಆರಂಭಕ್ಕಾಗಿಯೇ ಎಲ್ಲರನ್ನು ಕುತೂಹಲದಿಂದ ತುದಿಗಾಲಲ್ಲಿ ನಿಲ್ಲಿಸಿದೆ. ಮೇ 16ರ ಬೆಳಿಗ್ಗೆಯಿಂದ ಆರಂಭವಾಗುವ ಮತಎಣಿಕೆ ಕಾರ್ಯ, ಮಧ್ನಾಹ್ನದ ಸುಮಾರಿಗೆ ಬಹುತೇಕ ಫಲಿತಾಂಶಗಳು ಹೊರಬೀಳಲಿದೆ. ಏತನ್ಮಧ್ಯೆ ಆಯಾಯ ರಾಜ್ಯಗಳ ಘಟಾನುಘಟಿಗಳ ಭವಿಷ್ಯ ಕೂಡ ಬಹಿರಂಗವಾಗಲಿದೆ.ಆ ನಿಟ್ಟಿನಲ್ಲಿ ಮೇ 16 ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಮತಎಣಿಕೆ ಕಾರ್ಯಕ್ಕೆ ಬೇಕಿರುವ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಶನಿವಾರ ಮಧ್ನಾಹ್ನದೊಳಗೆ ರಾಜ್ಯದ 28 ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ ಎಂದು ರಾಜ್ಯ ಮುಖ್ಯ ಚುನಾವಣೆ ಆಧಿಕಾರಿ ಎಂ ಎನ್ ವಿದ್ಯಾಶಂಕರ್ ಹೇಳಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಆಯಾ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಮತಎಣಿಕೆ ಪ್ರಕ್ರಿಯೆಲ್ಲಿ 68 ಸಾವಿರ ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ. ಮೊದಲು ಅಂಚೆ ಮೂಲಕ ಬಂದಿರುವ ಮತಗಳು ಎಣಿಕೆ ಮಾಡಲಾಗುವುದು. ನಂತರ ಮತಯಂತ್ರಗಳನ್ನು ಕೈಗೆತ್ತಿಕೊಳ್ಳಲಾಗುವುದು. ವಿಧಾನಸಭಾವಾರು ಮತಎಣಿಕೆ ಮಾಡಲಾಗುವುದು ಎಂದು ವಿದ್ಯಾಶಂಕರ್ ವಿವರಿಸಿದರು. ಬೆಂಗಳೂರು ಸೇರಿದಂತೆ ಮತ ಎಣಿಕೆ ನಡೆಯುವ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲದೇ ಶುಕ್ರವಾರ ಬೆಳಿಗ್ಗೆಯಿಂದ ಭಾನುವಾರ ರಾತ್ರಿಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. |