ಕೋಲಾರ ಜಿಲ್ಲಾ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆ. ಶ್ರೀನಿವಾಸಗೌಡ, ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಎನ್. ಶ್ರೀನಿವಾಸ್ ಸೇರಿದಂತೆ 9 ಮಂದಿ ಕಾಂಗ್ರೆಸ್ ಸದಸ್ಯರನ್ನು ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಪಂ ಚುನಾವಣೆ ವೀಕ್ಷರಾಗಿದ್ದ ಎ ಕೃಷ್ಣಪ್ಪ, ಕಾಂಗ್ರೆಸ್‌ನ ಒಂಬತ್ತು ಮಂದಿಯನ್ನು ಜತೆಗೂಡಿಸಿಕೊಂಡ ಮಾಜಿ ಸಚಿವ ಶ್ರಿನಿವಾಸಗೌಡರು ಜೆಡಿಎಸ್ ಅಧಿಕಾರ ಹಿಡಿಯಲು ನೆರವಾಗಿದ್ದಾರೆ. ಪಕ್ಷದ ವಿರೋಧಿ ಕೆಲಸ ಮಾಡಿದ ಅವರ ವಿರುದ್ದ ಕೂಡಲೇ ಜಾರಿಗೆ ಬರುವಂತೆ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದರು.
ಜಿಪಂನಲ್ಲಿ ಕಾಂಗ್ರೆಸ್ ಅಧಿಕಾರ ಗದ್ದುಗೆ ಏರುವಷ್ಟು ಸಮರ್ಥವಾಗಿತ್ತು. ಆದರೆ ಅಂತಿಮವಾಗಿ ಶ್ರಿನಿವಾಸಗೌಡರ ವರ್ತನೆಯಿಂದಾಗಿ ಪಕ್ಷ ಅಧಿಕಾರ ಕಳೆದುಕೊಂಡಿತು. ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧವಾಗಿ ಕೆಲಸ ಮಾಡಿದ ಗೌಡರು, ಬಿಜೆಪಿ ಹಾಗೂ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡು ಪಕ್ಷಕ್ಕೆ ಅಪಮಾನ ಮಾಡಿದ್ದಾರೆ ಎಂದು ಕೃಷ್ಣಪ್ಪ ಕಿಡಿಕಾರಿದರು. |