ರಾಜ್ಯದ 28ಲೋಕಸಭಾ ಕ್ಷೇತ್ರಗಳು ಹಾಗೂ ಬೀದರ್ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕಾ ಕೇಂದ್ರಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಾ ಲೋಕಸಭಾ ಕ್ಷೇತ್ರಗಳ ಪ್ರತ್ಯೇಕ ಮತ ಎಣಿಕಾ ಕೇಂದ್ರಗಳು ಹಾಗೂ ಬೆಳಗಾವಿ, ಚಿಕ್ಕೋಡಿ ಕ್ಷೇತ್ರಗಳ ಒಂದೆಡೆ ನಡೆಯುವ ಮತಎಣಿಕಾ ಕೇಂದ್ರ ಸೇರಿದಂತೆ ಒಟ್ಟು 68ಸಾವಿರ ಚುನಾವಣಾ ಸಿಬ್ಬಂದಿ ಜೊತೆಗೆ ಸಾವಿರಾರು ಮಂದಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ರಾಜ್ಯ ಮೀಸಲು ಪಡೆಯ 136ತುಕಡಿಗಳು, ನಗರ ಸಶಸ್ತ್ರ ಪಡೆಯ ತುಕಡಿಗಳು, ಸಿವಿಲ್ ಪೊಲೀಸ್ ಸೇರಿ 10ಸಾವಿರಕ್ಕೂ ಹೆಚ್ಚು ಮಂದಿ ಪೊಲೀಸರು ಭದ್ರತೆ ಕೈಗೊಳ್ಳಲಿದ್ದಾರೆ. ಆರಂಭಿಕವಾಗಿ ಉಡುಪಿ-ಚಿಕ್ಕಮಗಳೂರು, ಮಂಗಳೂರು, ಶಿವಮೊಗ್ಗ ಕ್ಷೇತ್ರಗಳ ಫಲಿತಾಂಶ ಮೊದಲಿಗೆ ದೊರೆಯಲಿದೆ ಎಂದು ಚುನಾವಣಾ ಆಯುಕ್ತ ಎಂ.ಎನ್.ವಿದ್ಯಾಶಂಕರ್ ತಿಳಿಸಿದ್ದಾರೆ. ಮತ ಎಣಿಕೆಯ ವೀಡಿಯೋ ಚಿತ್ರೀಕರಣ ಹಾಗೂ 15ಸುತ್ತುಗಳ ಮತ ಎಣಿಕೆ ನಡೆಯಲಿದೆ ಎಂದರು.
ಮತ ಎಣಿಕೆ ನಡೆಯುವ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಕೇಂದ್ರಗಳ ಬಳಿ ಹಾಗೂ ಪ್ರದೇಶಗಳಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದ್ದು, ಪರಿಸ್ಥಿತಿಯ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಇನ್ಸಾಂಟ್ ಅವರು ತಿಳಿಸಿದರು.
ಪ್ರತಿ ಲೋಕಸಭಾ ಕ್ಷೇತ್ರದ ಮತಎಣಿಕೆ ಕೇಂದ್ರದ ಬಳಿ ಎಸ್‌ಪಿ ದರ್ಜೆಯ ಅಧಿಕಾರಿಯೊಬ್ಬರು ಭದ್ರತೆಯ ಉಸ್ತುವಾರಿ ವಹಿಸಲಿದ್ದು, ಪರಿಸ್ಥಿತಿಯ ಮೇಲೆ ನಿಗಾ ವಹಿಸಲಿದ್ದಾರೆ. ಮತಎಣಿಕೆ ಕೇಂದ್ರಕ್ಕೆ ತಪಾಸಣೆ ಇಲ್ಲದೆ ಯಾರೊಬ್ಬರು ಪ್ರವೇಶಿಸದಂತೆ ಎಚ್ಚರ ವಹಿಸಲಾಗಿದೆ ಎಂದರು.
ಮತ ಎಣಿಕೆ ಬೆಳಿಗ್ಗೆ 8ಕ್ಕೆ ಆರಂಭಗೊಳ್ಳಲಿದ್ದು, ಮಧ್ಯಾಹ್ನ 1ಗಂಟೆಯೊಳಗೆ ಫಲಿತಾಂಶ ಘೋಷಣೆಯಾಗುವ ನಿರೀಕ್ಷೆ ಇದ್ದು, ಫಲಿತಾಂಶದ ನಂತರವೂ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶದಲ್ಲಿನ ಭದ್ರತೆಯನ್ನು ಬಿಗಿಗೊಳಿಸಲಾಗುವುದು ಎಂದು ಹೇಳಿದರು. |