ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿದೆ. ಈ ಕುರಿತು ಕೂಲಂಕಷವಾಗಿ ಸಿಐಡಿ ತನಿಖೆ ನಡೆಯಬೇಕು ಎಂದು ಪಾಲಿಕೆಯ ಮಾಜಿ ಸದಸ್ಯರಾದ ನಿರಂಜನ್ ರಾಮ್ ಹಾಗೂ ಎಂ. ಪಾರಿ ಆಗ್ರಹಿಸಿದ್ದಾರೆ.
ಪಾಲಿಕೆಯಲ್ಲಿ ಭ್ರಷ್ಟ ಅಧಿಕಾರಿಗಳು ತುಂಬಿಕೊಂಡಿದ್ದಾರೆ. ಪಾಲಿಕೆಯಲ್ಲಿ ಎಡೆಬಿಡದೆ ನಡೆಯುತ್ತಿರುವ ಅವ್ಯವಹಾರವನ್ನು ತಡೆಗಟ್ಟಲು ನಿಷ್ಠಾವಂತ ಅಧಿಕಾರಿಯನ್ನು ಆಯುಕ್ತರನ್ನಾಗಿ ನೇಮಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪಾಲಿಕೆಯಲ್ಲಿ ಆರೋಗ್ಯ ಅಧಿಕಾರಿಯೊಬ್ಬರು ಕೋಟ್ಯಂತರ ರೂಪಾಯಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಆದರೆ ಆಯುಕ್ತರಿಗೆ ಈ ವಿಷಯ ತಿಳಿದಿದ್ದರೂ ಅವರು ಅದನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೊಳೆಗೇರಿಯಲ್ಲಿ ಜನರು ಮಲೇರಿಯಾ, ಚಿಕುನ್ ಗುನ್ಯಾ, ಡೆಂಗ್ಯೂನಂತಹ ಖಾಯಿಲೆಗಳಿಂದ ಬಲಿಯಾಗುತ್ತಿದ್ದಾರೆ. ಆದರೂ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ ತೋರುತ್ತಿದೆ ಎಂದು ದೂರಿದರು. |