ಒಂದೆಡೆ ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಗೆ ಕ್ಷಣಗಣನೆ ಆರಂಭವಾಗಿದ್ದರೆ, ಮತ್ತೊಂದೆಡೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಧಿಕಾರದ ಗದ್ದುಗೆಗೆ ಕುತ್ತು ಬರುವ ಕಾಲ ಸನಿಹವಾಗುತ್ತಿದೆ. 6 ಸಚಿವರು ಹಾಗೂ 14 ಶಾಸಕರು ಬಂಡಾಯ ಏಳುವ ಮೂಲಕ ಯಡಿಯೂರಪ್ಪನವರನ್ನು ಕೆಳಗಿಳಿಸುವ ಹುನ್ನಾರ ನಡೆಯುತ್ತಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ವದಂತಿಗಳು ಹರಿದಾಡತೊಡಗಿವೆ.
ಸಿಎಂ ಯಡಿಯೂರಪ್ಪ ಹಾಗೂ ಅವರ ಮಗನ ದರ್ಬಾರು ಕಂಡು ಬೇಸತ್ತಿರುವ ಆರಕ್ಕೂ ಹೆಚ್ಚು ಸಚಿವರು ಮತ್ತು ಅನೇಕ ಶಾಸಕರು ಬಂಡಾಯದ ಬಾವುಟ ಹಾರಿಸಲು ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ.
ಬಿಜೆಪಿಯಲ್ಲಿ ಈಗ ಬೆಂಕಿ ಕಿಡಿ ಬಿದ್ದಿದ್ದು, ಯಾವಾಗ ಹೊತ್ತಿ ಉರಿಯುತ್ತದೋ ಎಂಬ ಭಯ ನಾಯಕರಲ್ಲಿ ಕಾಡುತ್ತಿದೆ. ಸಿಎಂ ವಿರುದ್ಧ ಅಪಸ್ವರ ಎತ್ತಿರುವ ಶಾಸಕರು ಹಾಗೂ ಸಚಿವರಿಗೆ ಗಣಿಧಣಿಗಳ ಆಶೀರ್ವಾದ ಇದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಪಟ್ಟಕ್ಕೆ ತಂದು ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಲು ಹುನ್ನಾರ ನಡೆಸಿದ್ದು, ಬಿಜೆಪಿಯ ಸುಮಾರು 14 ಶಾಸಕರು ರಹಸ್ಯ ಸಭೆ ನಡೆಸಿ ಒಮ್ಮತ ಮೂಡಿದೆ ಎಂದು ಹೇಳಲಾಗುತ್ತಿದೆ. |