ಟಿಕೆಟ್ ಹಂಚಿಕೆಯಲ್ಲಿನ ಅಸಮರ್ಪಕತೆ ಹಾಗೂ ಪ್ರತಿಸ್ಪರ್ಧಿ ಬಿಜೆಪಿ ಚುನಾವಣೆಯಲ್ಲಿ ಹಣದ ಹೊಳೆ ಹರಿಸುವ ಮೂಲಕ ಅದನ್ನು ಎದುರಿಸಲು ಸಾಧ್ಯವಾಗದಿರುವುದೇ ರಾಜ್ಯದಲ್ಲಿ ಪಕ್ಷದ ಹಿನ್ನೆಡೆಗೆ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಪಕ್ಷವು ಗೆಲ್ಲುವ ಅಭ್ಯರ್ಥಿಗಳಿಗೆ ಬದಲಾಗಿ ಸಾಮಾಜಿಕ ನ್ಯಾಯ ತತ್ವ ಆಧರಿಸಿ ಟಿಕೆಟ್ ಹಂಚಿಕೆ ಮಾಡಿದ್ದು ನಿರೀಕ್ಷಿತ ಫಲ ನೀಡಿಲ್ಲ. ಈ ಕಾರಣಕ್ಕಾಗಿ ಪಕ್ಷ ತನ್ನ ನಿಲುವುವಿನಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ತಿಳಿಸಿದರು. ಆಡಳಿತಾರೂಢ ಬಿಜೆಪಿ ರಾಜ್ಯದಲ್ಲಿ ಹಣದ ಹೊಳೆಯನ್ನೇ ಹರಿಸಿತು. ಇದಕ್ಕೆ ಸರಿಸಮನಾಗಿ ಹಣವನ್ನು ವೆಚ್ಚ ಮಾಡುವುದಾಗಲೀ, ಸಂಪನ್ಮೂಲ ಹೊಂದಿಸುವುದಾಗಲಿ ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಇದರ ಜತೆಗೆ ಟಿಕೆಟ್ ಹಂಚಿಕೆಯಲ್ಲಿ ವಿಳಂಬ ಆಗಿದ್ದೂ ಸಹ ಪಕ್ಷ ನಿರಾಶಾದಾಯಕ ಸಾಧನೆಗೆ ಕಾರಣವಾಗಿರಬಹುದು ಎಂದು ಅವರು ಹೇಳಿದರು. ಪಕ್ಷಕ್ಕೆ ರಾಜ್ಯದಲ್ಲಿ ನಿರೀಕ್ಷಿತ ಫಲ ಸಿಕ್ಕಿಲ್ಲದಿದ್ದರೂ ಜನಾದೇಶವನ್ನು ಪಕ್ಷ ಒಪ್ಪುತ್ತದೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಗ್ರಾಮ ಮಟ್ಟದಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಲಿದೆ ಎಂದರು.
ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಪ್ರಮಾಣದಲ್ಲಿ ಗೆಲುವು ಸಿಕ್ಕಿದೆ. ಇದರ ಕೀರ್ತಿ ಪಕ್ಷದ ವರಿಷ್ಠೆ ಸೋನಿಯಾಗಾಂಧಿ , ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ. ಯುಪಿಎ ಸರ್ಕಾರದ ಸಾಧನೆಯನ್ನು ದೇಶದ ಜನತೆ ಮೆಚ್ಚಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು. |