ಒಂದಕ್ಕೆ ಎರಡರಷ್ಟು ಹಣ ಗಳಿಸುವ ಆಸೆಯಿಂದ ಈಗಾಗಲೇ ಹಲವಾರು ಕಂಪೆನಿಗಳು ಪಂಗನಾಮ ಹಾಕುತ್ತಿದ್ದರು ಕೂಡ ಜನರ ಲಾಭಕೋರತನದ ಆಸೆ ಬಿಟ್ಟಂತಿಲ್ಲ. ಅದಕ್ಕೆ ಪೂರಕ ಎಂಬಂತೆ ನಗರದ ಕನಕಪುರ ರಸ್ತೆಯ ಸಾರಕ್ಕಿ ಬಡಾವಣೆಯಲ್ಲಿ ಖಾಸಗಿ ಹಣಕಾಸು ಸಂಸ್ಥೆಯೊಂದು ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿರುವ ಘಟನೆ ವರದಿಯಾಗಿದೆ.
ಇದೀಗ ತುಳಸಿಯಾನ ವರ್ಲ್ಡ್ ಮಾರ್ಕ್‌ನ ವಂಚನೆ ವಿರುದ್ಧ ದೂರು 32ಮಂದಿ ದಾಖಲಿಸಿದ್ದಾರೆ, ವಂಚನೆಗೆ ಒಳಗಾದವರ ಸಂಖ್ಯೆ 150ಕ್ಕೂ ಹೆಚ್ಚಿದ್ದು, ಅವರಲ್ಲಿ ನಿವೃತ್ತ ಸೇನಾ ಅಧಿಕಾರಿಗಳು, ಕೆಲ ವ್ಯಾಪಾರಿಗಳು ಸೇರಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಜೆ.ಪಿ.ನಗರ ಪೊಲೀಸರು ತಿಳಿಸಿದ್ದಾರೆ.
ಅಂದಾಜು ಸುಮಾರು 4ಕೋಟಿ ರೂ.ಗೂ ಹೆಚ್ಚು ಪಂಗನಾಮ ಹಾಕಿ ಈ ಕಂಪೆನಿಯ ಸಂಸ್ಥಾಪಕರು ಪರಾರಿಯಾಗಿದ್ದಾರೆ. ಆದರೆ ವಿಪರ್ಯಾಸ ಎಂದರೆ ಕಂಪೆನಿಯಲ್ಲಿ ನಿರ್ದೇಶಕರಾಗಿದ್ದ ಆರ್.ಪಿ.ಜೈನ್ ಹಾಗೂ ಜಿತೇಂದ್ರ ಸಂಗ್ರಾಮ್ ಎಂಬಿಬ್ಬರು ಕೂಡ ಕಂಪೆನಿಯಿಂದ ವಂಚನೆಗೆ ಒಳಗಾಗಿದ್ದಾರೆ.
ಇವರಿಬ್ಬರು ಕೇವಲ ಕಂಪೆನಿಯ ಆಡಳಿತ ವ್ಯವಹಾರ ಮಾತ್ರ ನೋಡಿಕೊಳ್ಳುತ್ತಿದ್ದರು. ನಾವು ಕೂಡ ಕಂಪೆನಿಯಲ್ಲಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದೇವು. ಆದರೆ ಕಂಪೆನಿಯ ಎಲ್ಲಾ ವ್ಯವಹಾರ ನಮ್ಮ ಕೈಯಲ್ಲಿ ಇರಲಿಲ್ಲ. ಚೆಕ್ ವಿತರಣೆ, ಚೆಕ್‌ಗಳಿಗೆ ಸಹಿ ಮಾಡುವ ಅಧಿಕಾರವನ್ನು ರಮೇಶ್ ತುಳಸಿಯಾನ ಹೊಂದಿದ್ದರು ಎಂದು ಜಿತೇಂದ್ರ ಹಾಗೂ ಜೈನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. |