ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದಿರುವ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಹಣದ ಹೊಳೆ ಮತ್ತು ಅಧಿಕಾರ ಬಲದಿಂದ ಬಿಜೆಪಿ ಜಯ ಸಾಧಿಸಿದೆ ಎಂದು ಆರೋಪಿಸಿದರು.
ಮುಂಬರುವ ದಿನಗಳಲ್ಲಿ ಈ ವಿಚಾರ ಜನರಿಗೆ ಮನವರಿಕೆಯಾಗಲಿದೆ. ಹಣ ಮತ್ತು ಹೆಂಡವನ್ನು ಯಥೇಚ್ಛವಾಗಿ ಹಂಚಿ, ಆಡಳಿತ ಯಂತ್ರ ದುರುಪಯೋಗ ಪಡಿಸಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ಸರ್ಕಾರ ಜನಪರ ಆದುದಲ್ಲ, ಪಕ್ಷದೊಳಗಿನ ಆಂತರಿಕ ಕಲಹ, ಅಧಿಕಾರ ದಾಹ ಶೀಘ್ರವೇ ಬಯಲಿಗೆ ಬರಲಿದೆ ಎಂದರು.
ಗುಲ್ಬರ್ಗಾ ಲೋಕಸಭಾ ಕ್ಷೇತ್ರದಿಂದ ಜಯಗಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಕೇಂದ್ರದಲ್ಲಿ ಮತ್ತೆ ಯುಪಿಎ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವುದು ಸಂತಸ ತಂದಿದೆ. ಆದರೆ ರಾಜ್ಯದಲ್ಲಿ ಕಳೆದ ಬಾರಿ ಪಕ್ಷ ಎಂಟು ಸ್ಥಾನಗಳಿಸಿತ್ತು, ಈ ಬಾರಿ 6 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ ಎಂದರು.
ಪಕ್ಷದ ಸೋಲಿಗೆ ಕಾರಣವೇನೆಂಬುದನ್ನು ತಿಳಿಯಲು ಸಮಿತಿಯೊಂದನ್ನು ರಚಿಸಲಾಗುವುದು. ಅಭ್ಯರ್ಥಿಯ ಆಯ್ಕೆ ವಿಳಂಬ, ಸಂಘಟನೆ ಕೊರತೆಯೇ ಕಾಂಗ್ರೆಸ್ ಸೋಲಿಗೆ ಮುಖ್ಯ ಕಾರಣ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪಕ್ಷದ ಬಲವರ್ದನೆಯಾಗಬೇಕು. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಳೆದ ಐದು ವರ್ಷಗಳಿದ ಮಾಡಿದ ಜನಪರ ಕಾರ್ಯವೇ ಕಾರಣ ಎಂದು ಅವರು ಹೇಳಿದರು. |