ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸೋಮವಾರ ತಮ್ಮ 77ನೇ ವರ್ಷದ ಹುಟ್ಟುಹಬ್ಬವನ್ನು ಯಾವುದೇ ಗೌಜು-ಗದ್ದಲವಿಲ್ಲದೆ ಮನೆಯಲ್ಲೇ ಆಚರಿಸಿಕೊಂಡರು.ತಮ್ಮ ಹುಟ್ಟು ಹಬ್ಬದಂದು ಪ್ರತಿವರ್ಷ ತಿರುಪತಿಗೆ ತೆರಳಿ ಪೂಜೆ ಸಲ್ಲಿಸುವುದು ದೇವೇಗೌಡರ ವಾಡಿಕೆ. ಆದರೆ ಈ ಬಾರಿ ಯಾಕೋ ಅನಾರೋಗ್ಯದ ನೆಪವೊಡ್ಡಿ, ಅಭಿಮಾನಿಗಳಿಂದ ಹಾಗೂ ಹುಟ್ಟು ಹಬ್ಬದ ಅದ್ದೂರಿಯಿಂದ ದೂರ ಉಳಿದಿದ್ದರು. ಆದರೂ ಅನಾರೋಗ್ಯದ ನಡುವೆಯೂ ತಮ್ಮ ಕುಟುಂಬದ ಸದಸ್ಯರೊಂದಿಗೆ ಗವಿಪುರಂನಲ್ಲಿರುವ ಶ್ರೀಗವಿಗಂಗಾಧರೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇದೆಲ್ಲದರ ನಡುವೆಯೂ ದೇವೇಗೌಡರ ಅಭಿಮಾನಿಗಳು ಅವರ ಹೆಸರಿನಲ್ಲಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.ಅಲ್ಲದೇ ಅನಾರೋಗ್ಯದಿಂದಾಗಿ ಈ ತಿಂಗಳ 31ರವರೆಗೆ ತಾವು ಎಲ್ಲೂ ಹೋಗಲ್ಲ, ಯಾವುದೇ ಕಾರ್ಯಕ್ರಮದಲ್ಲೂ ಭಾಗವಹಿಸುವುದಿಲ್ಲ ಎಂದು ದೇವೇಗೌಡರು ತಿಳಿಸಿದ್ದಾರೆ. |