ನೆಲ-ಜಲ ಭಾಷೆ ಜತೆಗೆ ಸಮಗ್ರ ಕರ್ನಾಟಕದ ಹಿತ ಕಾಯಲು ಶ್ರಮಿಸುವುದಾಗಿ ಪ್ರಥಮ ಬಾರಿಗೆ ಸಂಸತ್ ಪ್ರವೇಶಿಸಿರುವ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಘೋಷಣೆಯಾದರೂ ಈಗ ಸೌಲಭ್ಯಕ್ಕಾಗಿ ಹೋರಾಟ ನಡೆಸಬೇಕಿದೆ. ಹೊಗೇನಕಲ್ ವಿವಾದದಲ್ಲೂ ರಾಜ್ಯದ ಹಿತ ಕಾಲಪಾಡಿಕೊಳ್ಳಬೇಕು. ಇಂಥ ಎಲ್ಲ ಹೋರಾಟಗಳಲ್ಲೂ ಪಕ್ಷಾತೀತವಾಗಿ ಜತೆ ನಿಂತು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್ ಸ್ಥಾಪಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ತಯಾರಿಸಲಾಗುವುದು. ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಶಿವಮೊಗ್ಗದ ವಿಶ್ವೇಶ್ವರಯ್ಯ ಹಾಗೂ ಎಂಪಿಎಂ ಇಂಡಸ್ಟ್ರೀಸ್‌ಗಳನ್ನು ಪುನಶ್ಚೇತನ ಮಾಡಲಾಗುವುದು ಎಂದು ಹೇಳಿದರು. ಬೆಂಗಳೂರು-ಶಿವಮೊಗ್ಗ ನಡುವೆ ಇಂಟರ್‌ಸಿಟಿ ರೈಲು ಓಡಿಸಲು ಕೇಂದ್ರ ಹಸಿರು ನಿಶಾನೆ ತೋರಿದೆ. ಯೋಜನೆಯ ಅನುಷ್ಠಾನಕ್ಕೆ ಕೇಂದ್ರದ ಮೇಲೆ ಮತ್ತಷ್ಟು ಒತ್ತಡ ಹೇರಲಾಗುವುದು ಎಂದರು.
ಆಡಳಿತದಲ್ಲಿ ಮುಖ್ಯಮಂತ್ರಿ ಪುತ್ರರ ಹಸ್ತಕ್ಷೇಪ ಹೆಚ್ಚಾಗಿದೆ ಎಂಬ ದೂರುಗಳಿಗೆ ಪ್ರತಿಕ್ರಿಯಿಸಿದ ಅವರು, ಅವೆಲ್ಲ ಆಧಾರ ರಹಿತ, ಪೂರ್ವಯೋಜಿತ ಟೀಕೆಗಳು ಎಂದರು.
|