ಜಿಂದಾಲ್ ಸಂಸ್ಥೆಗೆ ಅನುಕೂಲಕರ ವರದಿ ನೀಡಲು 2ಲಕ್ಷ ರೂ.ಗಳ ಲಂಚ ಪಡೆದ ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಜಯಲಕ್ಷ್ಮಿದೇವಿ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲಂಚ ಪಡೆದಿರುವ ಜಯಲಕ್ಷ್ಮಿ ದೇವಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಲೋಕಾಯುಕ್ತ ಎಡಿಜಿಪಿ ರೂಪ್‌ಕುಮಾರ್ ದತ್ತ ಅವರು ತಿಳಿಸಿದ್ದಾರೆ.
ಖಾಸಗಿ ಕಾಲೇಜುಗಳ ಮೂಲಭೂತ ಸೌಲಭ್ಯ ಸೇರಿ ಶೈಕ್ಷಣಿಕ ವಾತಾವರಣ ತಪಾಸಣೆ ನಡೆಸುವ ಸ್ಥಳೀಯ ತಪಾಸಣಾ ಸಮಿತಿ(ಎಲ್‌ಇಸಿ)ಯ ಅಧ್ಯಕ್ಷರೂ ಆಗಿರುವ ಜಯಲಕ್ಷ್ಮಿದೇವಿ ಅವರು ತಮ್ಮ ಮಗನನ್ನು ಕಳುಹಿಸಿ 2ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದಾರೆ.
ಸಿಂಡಿಕೇಟ್ ಸದಸ್ಯರಾಗಿರುವ ಜಯಲಕ್ಷ್ಮಿದೇವಿ ಅವರು ಕಾನೂನಿನ್ವಯ ಪ್ರೊಫೆಸರ್‌ಗಳು ಎಲ್‌ಇಸಿಯ ಅಧ್ಯಕ್ಷರಾಗುವುದನ್ನು ಉಲ್ಲಂಘಿಸಿ ಸಿಂಡಿಕೇಟ್ ಸಮಿತಿಯ ಸದಸ್ಯರ ಒಪ್ಪಿಗೆಯ ಮೇರೆಗೆ ತಾವೇ ಎಲ್‌ಇಸಿಯ ಅಧ್ಯಕ್ಷರಾಗಿದ್ದರು. ಎಲ್‌ಇಸಿಯ ಅಧ್ಯಕ್ಷರಾದ ನಂತರ ಬೆಂಗಳೂರು ವಿವಿಗೆ ಸಾಕಷ್ಟು ಕಾಲೇಜುಗಳ ಬೇಡಿಕೆ ಇರುವುದನ್ನು ಗಮನಿಸಿ ಖಾಸಗಿ ಕಾಲೇಜುಗಳ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲಕರ ರಿಪೋರ್ಟ್ ನೀಡುವಾಗ ಲಂಚಕ್ಕೆ ಒತ್ತಾಯಿಸುತ್ತಿದ್ದರು. |