ಹಣಬಲ ಮತ್ತು ತೋಳ್ಬಲ ಉಪಯೋಗಿಸಿ ಚುನಾವಣೆ ಎದುರಿಸುವಂತಹ ಈಗಿನ ಪರಿಸ್ಥಿತಿ ಮುಂದುವರಿದರೆ ಪ್ರಜಾಪ್ರಭುತ್ವಕ್ಕೆ ಗಂಡಾಂತರ ನಿಶ್ಚಿತ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಸಂಸದೀಯ ಮಂಡಳೀಯ ಅಧ್ಯಕ್ಷ ಡಿ.ಮಂಜುನಾಥ್ ಹೇಳಿದ್ದಾರೆ.
ವೋಟು ಮತ್ತು ನೋಟು ಪ್ರವೃತ್ತಿಯನ್ನು ಕಳೆದ ವಿಧಾನಸಭಾ ಚುನಾವಣೆಯಿಂದ ಬಿಜೆಪಿ ಹುಟ್ಟುಹಾಕಿದೆ. ಇದರಿಂದ ಸಾಮಾನ್ಯ ಜನ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲದಂತಹ ವಾತಾವರಣ ನಿರ್ಮಾಣವಾಗಿದೆ. ಇದನ್ನು ಹೋಗಲಾಡಿಸಲು ಜನರೇ ಎಚ್ಚೆತ್ತು ಪಾಠ ಕಲಿಸಬೇಕಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಜನತಾದಳ(ಎಸ್)ಪಕ್ಷ ಹೆಚ್ಚಿನ ಸ್ಥಾನಗಳಿಸದಿರಲು ಬಿಜೆಪಿಯವರ ಹಣಬಲ ಮತ್ತು ಬೆದರಿಕೆ ತಂತ್ರವೇ ಕಾರಣವಾಗಿದೆ. ಕೆಲವು ವಲಯಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮತಗಳು ಬಾರದೆ ಇರುವುದೂ ಒಂದು ಕಾರಣವಾಗಿದೆ. ಜೆಡಿಎಸ್ ರೈತರ ಪಕ್ಷ ಇದರ ಸಂಘಟನೆಗೆ ವರಿಷ್ಠರು ಹೆಚ್ಚಿನ ಗಮನ ನೀಡಬೇಕು ಜೊತೆಗೆ ಸೋಲಿನ ಆತ್ಮಾವಲೋಕನ ಮಾಡಲು ಆದಷ್ಟು ಶೀಘ್ರ ಪಕ್ಷದ ಕಾರ್ಯಕಾರಿ ಸಭೆ ಕರೆಯಬೇಕೆಂದು ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರನ್ನು ಒತ್ತಾಯಿಸಿರುವುದಾಗಿ ಹೇಳಿದರು. |