ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಕೇಂದ್ರ ಸರ್ಕಾರದ ಮುಂದಿರುವ ಕಾಫಿ ಪ್ಯಾಕೇಜನ್ನು ತಕ್ಷಣ ಜಾರಿಗೆ ತರುವಂತೆ ಬೆಂಗಳೂರು ಉತ್ತರ ಲೋಕಸಭಾ ಸದಸ್ಯ ಡಿ.ಬಿ. ಚಂದ್ರೇಗೌಡ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಫಿ ಬೆಳೆಗಾರರು ಚುನಾವಣೆ ಸಂದರ್ಭದಲ್ಲಿ ನಮ್ಮೊಂದಿಗೆ ನಿರೀಕ್ಷಿತ ಪ್ರಮಾಣದಲ್ಲಿ ಇರಲಿಲ್ಲ. ಇದಕ್ಕೆ ಕಾರಣಗಳು ಹಲವಾರಿದೆ. ಈ ಹಿಂದೆ ಇಂದಿರಾಗಾಂಧಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ದೂರ ನಿಂತ ಬೆಳೆಗಾರರು ಈಗ ಆ ಪಕ್ಷದ ಪರವಾಗಿ ನಿಂತರು ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಸ್ಥಿರತೆ ಬಯಸಿ ಜನ ನೀಡಿರುವ ತೀರ್ಮಾನ ಸ್ವಾಗತಾರ್ಹ. ಯುಪಿಎ ಸರ್ಕಾರ ರಚಿಸಲು ಅಗತ್ಯ ಇರುವ ಸ್ಥಾನಗಳು ಲಭ್ಯವಾಗಿಲ್ಲ. ರಾಜ್ಯದಲ್ಲಿ ಬಿಜೆಪಿ ಪರ ಉತ್ತಮ ಫಲಿತಾಂಶ ಬಂದಿದೆ. ದೊಡ್ಡ ರಾಜಕೀಯ ಪಕ್ಷ ಎನ್ನುವ ನಿರ್ಣಯವನ್ನು ಜನ ನೀಡಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಜನ ಮೆಚ್ಚುಗೆ ರೀತಿಯಲ್ಲಿ ಆಡಳಿತ ನೀಡಿರುವುದು ಇದಕ್ಕೆ ಕಾರಣ ಎಂದರು.
ರಾಜ್ಯದಲ್ಲಿ ಬಿಜೆಪಿ ಶೇಕಡ 43 ರಷ್ಟು ಮತಗಳು ಬಂದಿವೆ. ಕಾಂಗ್ರೆಸ್‌ಗೆ ಶೆ. 6 ರಷ್ಟು ಮತ ಕುಸಿದಿದೆ. ಪಕ್ಷದ ಅಭ್ಯರ್ಥಿಗಳು ಸೋತಿರುವಲ್ಲಿಯೂ ಅಂತರ ಕಡಿಮೆ ಇದೆ. ಬಿಜೆಪಿ ಪಕ್ಷ ಬಲವಾದ ನೆಲೆಯಲ್ಲಿ ನಿಂತಿದೆ ಎನ್ನುವುದು ಲೋಕಸಭಾ ಚುನಾವಣೆ ಸಾಕ್ಷಿಯಾಗಿದೆ. ಫಲಿತಾಂಶ ಪಕ್ಷದ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಹೇಳಿದರು. |