ಕೇಂದ್ರದ ಸಚಿವ ಸಂಪುಟ ಇನ್ನೆರಡು ದಿನಗಳಲ್ಲಿ ರಚನೆಯಾಗಲಿದ್ದು, ಈ ಹೊಸ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಆಸೆ ಕೈಗೂಡುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಈ ಹಿಂದೆ ಕುಮಾರಸ್ವಾಮಿ ಈ ಸಂಬಂಧ ಯುಪಿಎ ವರಿಷ್ಠೆ ಸೋನಿಯಾ ಅವರನ್ನು ಭೇಟಿ ಮಾಡಿದ್ದರು. ಆದರೆ ಸಂಪುಟದಲ್ಲಿ ಸ್ಥಾನ ಕೊಡುವ ಬಗ್ಗೆ ಸೋನಿಯಾ ಗಾಂಧಿ ಅವರಿಂದ ಯಾವುದೇ ಗ್ರೀನ್ ಸಿಗ್ನಲ್ ದೊರೆತಿಲ್ಲ ಎನ್ನಲಾಗಿದೆ.ಸಂಪುಟ ರಚನೆ ಸಂದರ್ಭದಲ್ಲಿ ಸಾಧ್ಯವಾದರೆ ಕುಮಾರಸ್ವಾಮಿಯವರನ್ನು ಸೇರಿಸಿಕೊಳ್ಳುವ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರಿಂದ ಉತ್ತ್ರರ ಸಿಕ್ಕಿದೆ. ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎಂಬುದನ್ನು ಸಂಪುಟ ರಚನೆ ಆಗುವವರೆಗೆ ಕಾದು ನೋಡಬೇಕಾಗಿದೆ. ಚುನಾವಣೆ ಮುನ್ನ ತೃತೀಯ ರಂಗದಲ್ಲಿ ಕಾಣಿಸಿಕೊಂಡಿದ್ದ ದೇವೇಗೌಡರು ಈಗ ಯುಪಿಎ ಬೆನ್ನ ಹಿಂದೆ ಬಿದ್ದು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಜೆಡಿಎಸ್ ಸದಸ್ಯರ ಬೆಂಬಲವನ್ನು ಬೇಷರತ್ ಆಗಿ ನೀಡುತ್ತಿದ್ದೇವೆ ಎಂದು ಅಧಿಕೃತ ಪತ್ರವನ್ನು ರಾಷ್ಟ್ರಪತಿಗಳಿಗೆ ಒಪ್ಪಿಸಿದ್ದಾರೆ. |