ಸುಮಾರು 28ಮಂದಿ ಮದುವೆ ಸಮಾರಂಭ ಮುಗಿಸಿಎತ್ತಿನ ಬಂಡಿಯಲ್ಲಿ ಊರಿಗೆ ವಾಪಸಾಗುತ್ತಿದ್ದ ವೇಳೆ ತುಂಬಿಹರಿಯುತ್ತಿರುವ ಹಳ್ಳಕ್ಕೆ ಬಿದ್ದು 18ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಬುಧವಾರ ಚಿತ್ರದುರ್ಗದ ಮಾಚೇನಹಳ್ಳಿ ಸಮೀಪದ ರಾಂಪುರದಲ್ಲಿ ನಡೆದಿದೆ.
ಮಂಗಳವಾರ ಮದುವೆ ಸಮಾರಂಭವನ್ನು ಮುಗಿಸಿ, ಇಂದು ಎತ್ತಿನಗಾಡಿಯಲ್ಲಿ ಊರಿಗೆ ಮರಳುತ್ತಿದ್ದ ವೇಳೆ ರಾಂಪುರದ ಹಗರಿಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ಎತ್ತಿನಬಂಡಿಯಲ್ಲಿದ್ದ ಹಲವು ಮಂದಿ ನೀರಲ್ಲಿ ಮುಳುಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈಗಾಗಲೇ 18ಶವಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದೆ. ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ನಾಲ್ಕು ಮಂದಿ ಶವಕ್ಕಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮೃತಪಟ್ಟವರೆಲ್ಲ ವೆಂಕಟಾಪುರ ಗ್ರಾಮಕ್ಕೆ ಸೇರಿದವರಾಗಿದ್ದು, ಇದರೆಲ್ಲ ಬಹುತೇಕ ಮಕ್ಕಳು, ಹೆಂಗಸರೇ ಸೇರಿದ್ದು, ಘಟನಾ ಸ್ಥಳದಲ್ಲಿ ಮೃತ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ.
ಮೃತಪಟ್ಟವರಲ್ಲಿ ವೆಂಕಟಾಪುರದ ಶ್ಯಾಮಲಾ, ಲಕ್ಷ್ಮಿ, ತಿಪ್ಪೇಶ್, ಹನುಮಣ್ಣ, ಸ್ವಪ್ನಾ, ನವೀನ, ಕೊಲ್ಲೂರಪ್ಪ, ದುರ್ಗಪ್ಪ, ಭೀಮಕಲ್ಲಪ್ಪ, ಮಾದಣ್ಣ, ಬಸಪ್ಪ, ಓಬಳಾಸ್ವಾಮಿ, ಪದ್ಮ, ರೇವಕಲ್ಲಪ್ಪ, ರುದ್ರಣ್ಣ, ಬಸವರಾಜು, ಹೊನ್ನೂರಮ್ಮ, ರುದ್ರಣ್ಣ ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಶಿವರಾಮ ರೆಡ್ಡಿ, ತಹಸೀಲ್ದಾರ್ ಭೇಟಿ ನೀಡಿದ್ದಾರೆ. ಶವಗಳ ಹುಡುಕಾಟ ಮತ್ತು ಮೇಲಕ್ಕೆತ್ತುವಲ್ಲಿ ಸ್ಥಳೀಯರ ನೆರವಿನಿಂದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. |