ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆಯಲು ಸಾಕಷ್ಟು ಕಸರತ್ತು ನಡೆಸಿದರೂ ಕೂಡ, ಕಾಂಗ್ರೆಸ್‌ನಿಂದ ಯಾವುದೇ ಗ್ರೀನ್ ಸಿಗ್ನಲ್ ದೊರೆಯದ ಹಿನ್ನೆಲೆಯಲ್ಲಿ ಎಚ್‌ಡಿಕೆ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಊಹಾಪೋಹ ಹಬ್ಬಿದೆ.
ಕೇಂದ್ರ ಸಚಿವ ಸ್ಥಾನವನ್ನು ನೀಡಲು ಸಾಧ್ಯವಿಲ್ಲ ಎಂಬುದನ್ನು ಕಾಂಗ್ರೆಸ್ ಪರೋಕ್ಷವಾಗಿ ತಿಳಿಸಿದೆ ಎಂಬ ಸುದ್ದಿಯಿಂದ ಜೆಡಿಎಸ್ ವಲಯದಲ್ಲಿ ಇಂತಹ ಅನುಮಾನ ಮೂಡಲು ಕಾರಣವಾಗಿದೆ.
ಸಚಿವ ಸ್ಥಾನ ಸಿಗದೆ ಇದ್ದಲ್ಲಿ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನಿಡಿ ವಿಧಾನಸಭಾ ಸದಸ್ಯತ್ವದಲ್ಲೇ ಮುಂದುವರಿಯುವುದಾಗಿ ಕುಮಾರಸ್ವಾಮಿ ತಮ್ಮ ಪಕ್ಷದ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಕಾಂಗ್ರೆಸ್ ಹೈಕಮಾಂಡ್ ಸಂಕಷ್ಟ ಕಾಲದಲ್ಲಿ ಜತೆಯಲ್ಲಿದ್ದ ಮಿತ್ರರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಕಾಂಗ್ರೆಸ್ ಸಂಕಷ್ಟ ಕಾಲದಲ್ಲಿದ್ದಾಗ ದೇವೇಗೌಡರು ಸ್ಪಂದಿಸಿರಲಿಲ್ಲ ಎಂದು ಕಾಂಗ್ರೆಸ್ ಪಕ್ಷ ಜೆಡಿಎಸ್ ಅನ್ನು ದೂರಿದೆ. ಇನ್ನುಳಿದಂತೆ ಬೇಷರತ್ ಬೆಂಬಲ ನೀಡಿ ಪತ್ರ ನೀಡಿರುವ ಯಾವುದೇ ಪಕ್ಷಕ್ಕೂ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗುತ್ತಿಲ್ಲ. ಜೆಡಿಎಸ್ ಕೂಡ ಇದೇ ಸಾಲಿಗೆ ಸೇರಲಿದೆ ಎಂದಿದೆ.
ಆರು ಸಂಸದರಿಗೆ ಒಂದು ಸಚಿವ ಸ್ಥಾನ ಎಂಬ ನಿರ್ಧಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ. ಕೇವಲ ಮೂರು ಸ್ಥಾನಗಳಲ್ಲಿ ಗೆದ್ದಿರುವ ಜೆಡಿಎಸ್‌ಗೆ ಒಂದು ಸಚಿವ ಸ್ಥಾನ ನೀಡಿದರೆ ಇನ್ನುಳಿದ ಪಕ್ಷಗಳ ಕೆಂಗೆಣ್ಣಿಗೆ ಗುರಿಯಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ಕುಮಾರಸ್ವಾಮಿಯವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. |