ಬಿಜೆಪಿ ನಾಯಕರ ನಡುವೆ ಮತ್ತೆ ಭಿನ್ನಮತ ಭುಗಿಲೆದ್ದಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಇಂಧನ ಸಚಿವ ಈಶ್ವರಪ್ಪ ನಡುವೆ ಮತ್ತೆ ವೈಮನಸ್ಸು ತಲೆದೋರಿದೆ ಎನ್ನಲಾಗಿದೆ.ಶಿವಮೊಗ್ಗದಲ್ಲಿ ಯಡಿಯೂರಪ್ಪನವರ ಮಗ ರಾಘವೇಂದ್ರ ಅವರು ಗೆಲುವು ಸಾಧಿಸಿದ ಸಂದರ್ಭದಲ್ಲಿ ಜಿಲ್ಲೆಯ ಸಚಿವರು, ಶಾಸಕರು ಹಾಗೂ ಮುಖಂಡರು ಸಂಭ್ರಮ ಆಚರಿಸುತ್ತಿದ್ದರೆ ಈಶ್ವರಪ್ಪ ಮಾತ್ರ ದೂರ ಉಳಿದಿರುವುದು ಯಡಿಯೂರಪ್ಪ ಅವರಿಗೆ ಬೇಸರ ತಂದಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ. ಹಾಗೆ ಈಶ್ವರಪ್ಪ ದೂರ ಉಳಿದಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮತ ಎಣಿಕೆ ದಿನವೂ ಕೇಂದ್ರಕ್ಕೆ ಬಂದಿಲ್ಲ, ಮತ ಎಣಿಕೆ ಕೇಂದ್ರಕ್ಕೆ ಬರುವುದಿರಲಿ ರಾಘವೇಂದ್ರ ಗೆಲುವು ಸಾಧಿಸಿದ ನಂತರವೂ ಕಚೇರಿಗೆ ಆಗಮಿಸಿಲ್ಲ, ಅಭಿನಂದನೆಯನ್ನು ಸಲ್ಲಿಸಿಲ್ಲ ಎಂದು ಈಶ್ವರಪ್ಪ ಅವರ ಬಗ್ಗೆ ಪಕ್ಷದ ಹಿರಿಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆಯ ನಂತರ ಸಚಿವ ಈಶ್ವರಪ್ಪ ಸ್ಥಾನ ಬದಲಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ಇದೇ ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿದೆ. |