ಬಿಬಿಎಂಪಿ ಅನುಮತಿ ಇಲ್ಲದೆ ಮೆಟ್ರೋ ಯೋಜನೆಗಾಗಿ ಲಾಲ್‌ಬಾಗ್‌ನಲ್ಲಿ ಮರ ಕಡಿಯದಂತೆ ಹೈಕೋರ್ಟ್ ಆದೇಶಿಸಿದೆ. ಯೋಜನೆಗೆ ಲಾಲ್‌ಬಾಗ್‌ನಲ್ಲಿ ಮರಗಳ ಮಾರಣಹೋಮ ನಡೆಸುತ್ತಿರುವುದನ್ನು ವಿರೋಧಿಸಿ ಎನ್ವಾರ್‌ಮೆಂಟ್ ಸಪೋರ್ಟ್ ಸಂಸ್ಥೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಕೆ.ಪಾಟೀಲ್ ಹಾಗೂ ವಿ.ಜಗನ್ನಾಥ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಮರ ಕಡಿಯಲು ನಿರ್ಬಂಧ ವಿಧಿಸಿದೆ.
ಲಾಲ್‌ಬಾಗ್‌ನಲ್ಲಿ ಮರ ಕಡಿಯುವುದನ್ನು ವಿರೋಧಿಸಿ ಪರಿಸರವಾದಿ ಹೋರಾಟಗಾರರು ಕೋರ್ಟ್ ಮೊರೆ ಹೋಗಿ ಮರ ಕಡಿಯದಂತೆ ತಡೆಯಾಜ್ಞೆ ನೀಡಬೇಕೆಂದು ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಪೀಠವು, ತಡೆಯಾಜ್ಞೆ ನೀಡಿ ಎಷ್ಟು ಮರಗಳನ್ನು ಕಡಿಯಲಾಗಿದೆ ಎಂಬುದರ ಬಗ್ಗೆ ವಿವರ ನೀಡುವಂತೆ ಸೂಚಿಸಿತ್ತು.
ಗುರುವಾರ ವಿಚಾರಣೆ ಮುಂದುವರಿಸಿದ ನ್ಯಾಯಪೀಠಕ್ಕೆ ಅಡ್ವೊಕೇಟ್ ಜನರಲ್ ಅವರು, ಯೋಜನೆಗಾಗಿ ಮರಕಡಿಯಲು ವೃಕ್ಷ ಸಂರಕ್ಷಣಾ ಸಮಿತಿಯ ಪರವಾನಿಗೆ ಪಡೆಯಲಾಗಿದೆ, ಸಮಿತಿ ಅನುಮತಿ ನೀಡಿದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ವಾದ-ಪ್ರತಿವಾದಗಳನ್ನು ಆಲಿಸಿದ ವಿಭಾಗೀಯ ಪೀಠ ವೃಕ್ಷ ಸಂರಕ್ಷಣಾ ಸಮಿತಿ ಅನುಮತಿ ನೀಡುವವರೆಗೆ ಮರ ಕಡಿಯದಂತೆ ಹೈಕೋರ್ಟ್ ನಿರ್ಬಂಧ ಹೇರಿ ಆದೇಶಿಸಿದೆ. |