ದೆಹಲಿಯಲ್ಲಿ ರಾಜ್ಯ ಸರ್ಕಾರದ ನೂತನ ಪ್ರತಿನಿಧಿಯಾಗಿ ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ವಕ್ತಾರ ಧನಂಜಯ ಕುಮಾರ್ ನೇಮಕಗೊಂಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಈ ನೇಮಕ ಮಾಡಿದ್ದು, ಅಧಿಕೃತ ಆದೇಶ ಇನ್ನಷ್ಟೇ ಹೊರಬೀಳಬೇಕಿದೆ.
ಇದುವರೆಗೆ ಈ ಹುದ್ದೆಯಲ್ಲಿ ಸುಭಾಷ್ ಭರಣಿ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನು ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಧನಂಜಯ್ ಅವರನ್ನು ಆಯ್ಕೆ ಮಾಡಲಾಗಿದೆ.
ಕೇಂದ್ರ ಸಚಿವ ಸೇರಿದಂತೆ ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಧನಂಜಯ್ ಕುಮಾರ್ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
ತಮ್ಮ ನೇಮಕದ ವಿಷಯ ಪ್ರಕಟಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಅನುಕೂಲ ಮತ್ತು ಸಹಾಯಗಳ ಬಗ್ಗೆ ತಾವು ವಿಶೇಷ ಗಮನ ಹರಿಸುವುದಾಗಿ ಹೇಳಿದರು. ಈ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಭಾಷ್ ಭರಣಿ ಅವರನ್ನು ಕರ್ನಾಟಕ ರೇಷ್ಮೆ ಮಾರಾಟ ನಿಗಮದ ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿದೆ ಎನ್ನಲಾಗಿದೆ. |