ಉದ್ಯಾನನಗರಿ ಮೇಲೆ ಉಗ್ರರ ಕರಿನೆರಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧ, ವಿಕಾಸ ಸೌಧ, ರಾಜಭವನ..ಹೀಗೆ ಎಲ್ಲ ಕಡೆ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ಆದರೆ ಈಗ ಶಿಕ್ಷಣ ಇಲಾಖೆಗೂ ಸಿಸಿ ಟಿವಿ ಬಂದಿದೆ. ಇದು ಉಗ್ರರ ಭೀತಿಯಿಂದಲ್ಲ. ಬದಲಾಗಿ ಇಲಾಖೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ.
ಕೇಂದ್ರ ಕಚೇರಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಏಳು ಕ್ಯಾಮೆರಾ ಜೋಡಿಸಿದೆ. ದ್ವಿತೀಯ ಪಿ.ಯು. ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪ್ರವೇಶ ದ್ವಾರ ಹಾಗೂ ಸಿಇಟಿ ಸೀಟು ಹಂಚಿಕೆ ಕೊಠಡಿಯಲ್ಲಿ ತಲಾ ಒಂದು ಕ್ಯಾಮರಾ ಅಳವಡಿಸಲಾಗಿದೆ.
ಕಚೇರಿಗೆ ನಿತ್ಯ ಸಾವಿರಾರು ಜನರು ಬಂದು ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಬಿಗಿ ಭದ್ರತೆ ಏರ್ಪಡಿಸುವಂತೆ ಪೊಲೀಸ್ ಇಲಾಖೆ ಕೂಡಾ ಸಲಹೆ ನೀಡಿದೆ.
ಸಿಸಿ ಕ್ಯಾಮರಾಗಳು ಸೆರೆ ಹಿಡಿಯುವ ದೃಶ್ಯಗಳನ್ನು ಹಿರಿಯ ಅಧಿಕಾರಿಗಳು ಕುಳಿತಲ್ಲಿಂದಲೇ ವೀಕ್ಷಿಸುವ ವ್ಯವಸ್ಥೆ ರೂಪಿಸಲಾಗಿದೆ. ಕೌನ್ಸೆಲಿಂಗ್ ಸಂದರ್ಭದಲ್ಲಿ ಇಡೀ ಕಟ್ಟಡವನ್ನು ಸಿಸಿ ಟಿವಿ ಸುತ್ತುವರಿಯಲಿದೆ. |