''ನನ್ನ ತಾಯಾಣೆಗೂ ಪಕ್ಷಕ್ಕೆ ದ್ರೋಹ ಮಾಡಿಲ್ಲ. ಕೋಲಾರ ಲೋಕಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ'' ಎಂದು ಮುಜಾರಾಯಿ ಖಾತೆ ಸಚಿವ ಎನ್ ಕೃಷ್ಣಯ್ಯ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದರೆ ಅವರ ಮಾತನ್ನು ಪಾಲಿಸುತ್ತೇನೆ. ಅವರ ಮಾರ್ಗದರ್ಶನದೊಂದಿಗೆ ಸಾಮಾನ್ಯ ಶಾಸಕನಾಗಿ ಕ್ಷೇತ್ರದ ಕೆಲಸ ಮಾಡುವೆ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡು ಎಂದು ಮುಖ್ಯಮಂತ್ರಿಗಳು ಹೇಳಿಲ್ಲ ಎಂದರು. ಶಾಸಕನಾಗಿ ಆಯ್ಕೆಯಾಗಿರುವುದೇ ತುಂಬಾ ಖುಷಿಯಾಗಿದೆ. ಆದರಲ್ಲಿ ಸಚಿವ ಸ್ಥಾನ ಕೊಟ್ಟು ಜನರ ಕೆಲಸ ಮಾಡಲು ಯಡಿಯೂರಪ್ಪ ಅವಕಾಶ ಮಾಡಿಕೊಟ್ಟಿದ್ದಾರೆ. ಇದಕ್ಕಿಂತ ಸೌಭಾಗ್ಯ ಬೇಕೇ ಎಂದು ಶೆಟ್ಟಿ ಗುಣಗಾನ ಮಾಡಿದರು.
ಕೋಲಾರ ಕ್ಷೇತ್ರದಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿರುವೆ ಎನ್ನುವ ಆರೋಪ ಶುದ್ಧ ಸುಳ್ಳು. ಕೋಲಾರದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಕ್ಕಲಿಗರಿಗೆ ವೀರಯ್ಯ ಅವರನ್ನು ಕಂಡರೆ ಆಗುವುದಿಲ್ಲ ಎಂಬ ಮಾತು ಕೇಳಿ ಬಂದಿದೆ. ಒಕ್ಕಲಿಗರ ಮತಗಳು ಬಿಜೆಪಿಗೆ ಬಾರದೇ ಇರಬಹುದು ಎಂಬ ಅನುಮಾನವಿದೆ. ಅಲ್ಲದೇ, ಜೆಡಿಎಸ್ ಅಭ್ಯರ್ಥಿ ಎರಡು ಲಕ್ಷ ಮತಗಳನ್ನು ಪಡೆದಿರುವುದು ಇಲ್ಲಿ ಗಮನಾರ್ಹ ಎಂದರು.
ಲೋಕಸಭೆ ಚುನಾವಣೆ ದಿನಾಂಕ ಪ್ರಕಟಗೊಂಡ ನಂತರ ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ಕ್ಷೇತ್ರಾದ್ಯಂತ ಪ್ರವಾಸ ಮಾಡಿ ಮತಯಾಚಿಸಿದ್ದೇನೆ. ಆದರೂ ನನ್ನ ವಿರುದ್ಧವೇಕೆ ದೂರು ಬಂದಿದೆ ಎಂಬುದು ಗೊತ್ತಿಲ್ಲ ಎಂದು ಸಚಿವ ಶೆಟ್ಟಿ ಅಲವತ್ತುಕೊಂಡಿದ್ದಾರೆ.
|