ಪದವಿ ಕಾಲೇಜು ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಕೆಲವು ಮಧ್ಯವರ್ತಿಗಳು ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರು ಬಂದಿದ್ದು, ಯಾರೂ ಹಣ ನೀಡಿ ಮೋಸ ಹೋಗಬಾರದು ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಡಾ.ಎಚ್.ಎಸ್.ಶಿವಯೋಗಿಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಖಾಲಿ ಇರುವ 2,550 ಹುದ್ದೆಗಳಲ್ಲಿ 2,354 ಹುದ್ದೆಗಳಿಗೆ ಈಗಾಗಲೇ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಪನ್ಯಾಸಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ಷರತ್ತಿನ ಮೇಲೆ ನೇಮಕಾತಿ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಕೆಲವರು ತುಮಕೂರಿನಲ್ಲಿ ಸಭೆ ನಡೆಸಿ ನೇಮಕಾತಿಗೊಳ್ಳುತ್ತಿರುವ ಉಪನ್ಯಾಸಕರಿಂದ ನಿರ್ದಿಷ್ಟ ಮೊತ್ತದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಇದರ ಹಿಂದೆ ಸರ್ಕಾರ, ಸಚಿವರು ಹಾಗೂ ಶಿಕ್ಷಣ ಇಲಾಖೆಗೆ ಕೆಟ್ಟ ಹೆಸರು ತರುವ ಜಾಲ ಕೆಲಸ ಮಾಡುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದರು.
ಹೊರರಾಜ್ಯಗಳ ವಿಶ್ವವಿದ್ಯಾಲಯಗಳಿಂದ ದೂರ ಶಿಕ್ಷಣದ ಮೂಲಕ ಎಂ.ಫಿಲ್ ಪಡೆದ ಬಗ್ಗೆ ಬೆಳಗಾವಿ ಅಧಿವೇಶನದಲ್ಲೇ ಚರ್ಚೆ ಮಾಡಿದ್ದೆವು. ಈ ಕುರಿತು ಕೆಲವು ವಿಶ್ವವಿದ್ಯಾಲಯಗಳು ಸರ್ಕಾರಕ್ಕೆ ಅಗತ್ಯ ದಾಖಲೆ ನೀಡಿದ್ದು, ಉಳಿದ ವಿವಿಗಳ ವರದಿ ಬರಬೇಕಿದೆ ಎಂದು ಹೇಳಿದರು. |