ಕಾಂಗ್ರೆಸ್ ಚುನಾವಣೆಯಲ್ಲಿ ಸೋತಿರಬಹುದು, ಆದರೆ ಕಾಂಗ್ರೆಸ್ ದುರ್ಬಲವಾಗಿಲ್ಲ ಎಂದಿರುವ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ಗೆ ಅಪಾರವಾದ ಕಾರ್ಯಕರ್ತರ ಪಡೆ ಇದೆ. ಅಲ್ಲದೇ ಕೋಮುವಾದಿ ಪಕ್ಷದ ಆಡಳಿತವನ್ನು ಕಿತ್ತು ಹಾಕಬೇಕು ಎಂದೇ ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದ ಐವರಿಗೆ ಸಚಿವ ಸ್ಥಾನ ನೀಡಲಾಗಿದೆ. ಇದನ್ನು ಸಾಕಾರಗೊಳಿಸಲು ನಾವೆಲ್ಲ ಒಗ್ಗಟ್ಟಾಗಿ ಹೋರಾಟ ನಡೆಸೋಣ ಎಂದು ಕರೆ ನೀಡಿದರು.ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಗದ್ದುಗೆ ಏರಿದ ನಂತರ ಪಕ್ಷದ ಶಾಸಕರು ಮತ್ತು ನಾಯಕರಿಗೆ ಕರೆ ನೀಡಿದ ಅವರು, ನನ್ನ ಬಗ್ಗೆ ಯಾರೂ ಸಂಶಯ ಪಡುವ ಅಗತ್ಯವಿಲ್ಲ, ನಾನು ಒರಟನಂತೆ ಕಂಡರೂ ಒರಟನಲ್ಲ. ನನ್ನ ಮಾತಿನಲ್ಲಿ ಗಡಸುತನವಿದೆ. ಹಾಗಂತ ನಾನು ಕೆಟ್ಟವನೂ ಅಲ್ಲ, ಪಕ್ಷದ ಎಲ್ಲರನ್ನೂ ಒಟ್ಟಾಗಿ ಒಯ್ಯುವ ಮೂಲಕ ಹೈಕಮಾಂಡ್ ಕನಸು ನನಸು ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸುವೆ ಎಂದು ಹೇಳಿದರು.ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 19ಸ್ಥಾನ ಪಡೆದ ಮಾತ್ರಕ್ಕೆ ಅದು ಬಲಿಷ್ಠ ಎಂದು ಅರ್ಥವಲ್ಲ. ಹಿಂದೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿರುವುದು ಹೌದು, ಇದಕ್ಕೆ ಕಾರಣವೇನು ಅಥವಾ ಯಾರು ಕಾರಣ ಎಂಬುದರ ಕುರಿತು ಶೋಧನೆ ಮುಖ್ಯವಲ್ಲ. ಕೆಲ ನ್ಯೂನತೆಗಳಿಂದ ಪಕ್ಷಕ್ಕೆ ಸೋಲು ಉಂಟಾಗಿರಬಹುದು ಎಂದರು. |