ಸರ್ಕಾರದ ವಿವಿಧ ಕಾಮಗಾರಿಗಳಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಕಳಪೆ ಕಾಮಗಾರಿ ತಡೆಗೆ ಗುಣಮಟ್ಟ ನಿಯಂತ್ರಣ ಕಾರ್ಯ ಪಡೆ ರಚಿಸಿದ ಮೊದಲ ಸರ್ಕಾರ ಎಂಬ ಹೆಗ್ಗಳಿಕೆಗೆ ತಮ್ಮ ಸರ್ಕಾರ ಪಾತ್ರವಾಗಿದೆ. ಈ ನಿಟ್ಟಿನಲ್ಲಿ ಕಾಮಗಾರಿಗಳಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳುವ ಅಧಿಕಾರಿಗಳನ್ನು ಪ್ರೋತ್ಸಾಹಿಸಿ ಕಳಪೆ ಕಾಮಗಾರಿಗೆ ಉತ್ತೇಜನ ನೀಡುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತಗೆದುಕೊಳ್ಳಲಾಗುವುದು ಎಂದರು.
ಸರ್ಕಾರದ ವಿವಿಧ ಕಾರ್ಯಪಡೆಗಳು ಮತ್ತು ಆಯೋಗಗಳ ಪ್ರಗತಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದ್ದಾರೆ.
ರಾಜ್ಯದಲ್ಲೇ ದೊರಕುವ ಮಾನವ ಸಂಪನ್ಮೂಲ ಹಾಗೂ ನೈಸರ್ಗಿಕ ಸಂಪತ್ತನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ರಾಜ್ಯದ ಅಭಿವೃದ್ದಿ ಸಾಧಿಸಲು ರಾಷ್ಟ್ರಮಟ್ಟದಲ್ಲಿ ಮೊದಲ ಬಾರಿಗೆ ಪರಿಣಿತರ, ತಜ್ಞ ಮತ್ತು ಮೇಧಾವಿಗಳ ಸಹಕಾರ, ಸಹಯೋಗದೊಂದಿಗೆ ಅಭಿವೃದ್ದಿ ಕಡೆ ಗಮನ ಹರಿಸಿದೆ. ವಿವಿಧ ಕಾರ್ಯಪಡೆ ಹಾಗೂ ಆಯೋಗಗಳು ನಿಷ್ಠೆಯಿಂದ ಕೆಲಸ ನಿರ್ವಹಿಸುತ್ತಿದ್ದು, ಅವರ ಕೆಲಸ ತೃಪ್ತಿ ತಂದಿದೆ ಎಂದರು. |