ತಮ್ಮ ಓಡಾಟಕ್ಕೆ ಐಷಾರಾಮಿ ಕಾರು ಬೇಕೆಂದು ಬೇಡಿಕೆ ಇಟ್ಟಿದ್ದೇನೆ ಎಂಬ ವರದಿ ಊಹಾಪೋಹದ್ದು, ಈ ವರದಿಗಳನ್ನು ಪ್ರಕಟಿಸಿರುವುದರ ಹಿಂದೆ ಷಡ್ಯಂತ್ರ ಇದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.
ಸರ್ಕಾರದ ಮುಂದೆ ಐಷಾರಾಮಿ ಕಾರಿಗೆ ಬೇಡಿಕೆ ಇಟ್ಟಿರುವ ವರದಿಗಳನ್ನು ಸಾಬೀತು ಪಡಿಸಿದರೆ ರಾಜಕೀಯದಿಂದಲೇ ನಿವೃತ್ತಿಯಾಗುವುದಾಗಿ ಪತ್ರಿಕಾಗೋಷ್ಠಿಯಲ್ಲಿಂದು ಸವಾಲು ಹಾಕಿದರು. ಈ ವರದಿಯನ್ನು ಸೃಷ್ಟಿಸಿದವರು ಕ್ಷಮೆ ಕೇಳಬೇಕು ಇಲ್ಲವಾದರೆ ಅವರ ವಿರುದ್ಧ ಹಕ್ಕುಚ್ಯುತಿ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಈ ವರದಿಗಳ ಹಿಂದೆ ಯಾರಿದ್ದಾರೆಂಬುದು ಗೊತ್ತಿದೆ. ತಮ್ಮ ಧ್ವನಿ ಅಡಗಿಸುವ ಪ್ರಯತ್ನ ಇದಾಗಿದ್ದು, ಇದಕ್ಕೆಲ್ಲ ತಾವು ಜಗ್ಗುವುದಿಲ್ಲ ಎಂದ ಅವರು, ಸವಲತ್ತುಗಳಿಗಾಗಲಿ, ಐಷಾರಾಮಿ ಜೀವನಕ್ಕಾಗಲಿ ಎಂದೂ ಹಾತೊರೆದಿಲ್ಲ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕನಾಗಿ ರಾಜ್ಯದಲ್ಲಿ ಓಡಾಡಲು ಕಡಿಮೆ ಇಂಧನ ಬಳಕೆಯ ವಾಹನಗಳನ್ನು ಒದಗಿಸುವಂತೆ ಸಭಾಪತಿಗಳಿಗೆ ಪತ್ರ ಬರೆದಿದ್ದೇನೆ ಹೊರತು ಸರ್ಕಾರಕ್ಕೆ ಬರೆದಿಲ್ಲ. ಹಾಗೇ ಇಂತಹದ್ದೇ ಕಾರು ಬೇಕು ಎಂದು ಕೇಳಿಲ್ಲ. ಆದರೂ ಮುಖ್ಯಮಂತ್ರಿಗಳಿಗೆ ಸರಿಸಮಾನವಾಗಿ 25ಲಕ್ಷ ರೂ.ಕಾರು ಬೇಕು ಎಂದು ವರದಿ ಮಾಡಿರುವುದು ತಮಗೆ ನೋವು ತಂದಿದೆ ಎಂದರು. |