ಅಸಮಾಧಾನದಿಂದ ಬಂಡಾಯದ ಬಾವುಟ ಹಾರಿಸಿದ್ದ ಭಿನ್ನಮತೀಯರ ಬೆದರಿಕೆಗೆ ಮಣಿಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಡಳಿತ ಯಂತ್ರವನ್ನು ಮತ್ತಷ್ಟು ಚುರುಕುಗೊಳಿಸುವ ಕಾರ್ಯದಲ್ಲಿ ಪ್ರವೃತ್ತರಾಗಿದ್ದಾರೆ.ಭಿನ್ನಮತೀಯ ಚಟುವಟಿಕೆಗಳನ್ನು ನಿರ್ಲಕ್ಷಿಸಿ ಕಳೆದ ಎರಡು ದಿನಗಳಿಂದ ಆಡಳಿತ ಯಂತ್ರವನ್ನು ಚುರುಕುಗೊಳಿಸಲು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿರುವ ಮುಖ್ಯಮಂತ್ರಿಗಳು ಮಂಗಳವಾರವೂ ಜಿಲ್ಲಾಧಿಕಾರಿಗಳ ಸಭೆ ನಡೆಸಿದ್ದರು.ಭಿನ್ನಮತೀಯ ಸಚಿವರು, ಶಾಸಕರು ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ, ಹಾಲಪ್ಪ ಸೇರಿದಂತೆ ಆರು ಮಂದಿ ಸಚಿವರನ್ನು ಕೈಬಿಡುವುದಕ್ಕೆ ಇಂದು ನೀಡಿದ್ದ ಗಡುವನ್ನು ನಿರ್ಲಕ್ಷಿಸಿರುವ ಮುಖ್ಯಮಂತ್ರಿಗಳು ತಮ್ಮ ಪಾಡಿಗೆ ತಾವು ಅಭಿವೃದ್ಧಿ ಕಾರ್ಯಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.ತಾವು ನೀಡಿದ್ದ ಗಡುವಿಗೆ ಮುಖ್ಯಮಂತ್ರಿಗಳು ಕವಡೆಕಾಸಿನ ಕಿಮ್ಮತ್ತು ನೀಡದಿರುವುದು ತೆರೆಮರೆಯಲ್ಲಿ ಭಿನ್ನಮತೀಯ ಚಟುವಟಿಕೆ ನಡೆಸಿದ್ದ ಗಣಿ ಧಣಿಗಳು ಹಾಗೂ ಕೆಲ ಸಚಿವರು ಶಾಸಕರಿಗೆ ತೀವ್ರ ಹಿನ್ನೆಡೆ ಉಂಟಾದಂತಾಗಿದೆ. |