ಹಾವೇರಿ ಗೋಲಿಬಾರ್ ಪ್ರಕರಣದಲ್ಲಿ ಸತ್ಯ ಹೇಳುವವರಿಗೆ ಆಯೋಗದ ವಕೀಲರು ಭಯ ಉಂಟು ಮಾಡುವ ಪ್ರಯತ್ನ ನಡೆಸಿದ್ದಾರೆ ಎಂದು ಕಾಂಗ್ರೆಸ್ ಹಿರಿಯನ ಮುಖಂಡ ಎಚ್.ಕೆ.ಪಾಟೀಲ್ ಮಂಗಳವಾರ ಗಂಭೀರವಾಗಿ ಆರೋಪ ಮಾಡಿದರು.ಹಾವೇರಿ ಗೋಲಿಬಾರ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾ.ಜಗನ್ನಾಥ್ ಶೆಟ್ಟಿ ಅವರ ಆಯೋಗದ ಮುಂದೆ ಹಾಜರಾದ ಪಾಟೀಲರು ಹೇಳಿಕೆ ನೀಡಿ, ಗೋಲಿಬಾರ್‌ನಲ್ಲಿ ಮೃತಪಟ್ಟ ರೈತ ಸಿದ್ದಲಿಂಗಪ್ಪ ಚೂರಿ ಅವರ ಪ್ರತಿಮೆಯನ್ನು ಸ್ಥಾಪಿಸುವ ಹೇಳಿಕೆಯನ್ನು ಸಿಎಂ ನೀಡಿದ್ದಾರೆ. ಆದರೆ ಚೂರಿಯನ್ನು ರೈತನಲ್ಲ ಎಂಬ ನಿಲುವನ್ನು ಸರ್ಕಾರ ಕೈಗೊಂಡಿರುವುದು ಸರಿಯೇ ಎಂದು ಪ್ರಶ್ನಿಸಿದರು.ಆಯೋಗದ ವಕೀಲರಾದ ಮಧುಸೂದನ ಅಡಿಗ ಅವರು ನನ್ನ ಜೊತೆಯಲ್ಲಿ ಬಂದಿರುವ ಮಾಜಿ ಶಾಸಕ ಸಲೀಂ ಅಹಮದ್ ಅವರಿಗೆ ಸಮನ್ಸ್ ಜಾರಿ ಮಾಡಿ ಎಂದಿದ್ದಾರೆ. ಈ ರೀತಿಯ ಅವರ ನಿಲುವು ನೋಡಿದರೆ ಸತ್ಯ ಪ್ರತಿಪಾದಿಸುವವರಿಗೆ ಭಯ ಹುಟ್ಟಿಸುವ ಯತ್ನ ನಡೆಸುತ್ತಿದ್ದಾರೆ ಎಂದೆನಿಸುವುದಿಲ್ಲವೇ ಎಂದು ನ್ಯಾಯಮೂರ್ತಿಗಳನ್ನು ಕೇಳಿದರು.ಆಯೋಗದ ಬಗ್ಗೆ ನನಗೆ ಅಪಾರ ಗೌರವವಿದ್ದು, ಎಂದೂ ಆಯೋಗದ ಘನತೆಗೆ ಕುಂದು ತರುವ ಯತ್ನ ನಡೆಸಿಲ್ಲ ಈ ಬಗೆಗಿನ ಪತ್ರಿಕಾ ವರದಿಯು ವಿಶ್ಲೇಷಣೆಯೇ ಹೊರತು ನನ್ನ ಹೇಳಿಕೆಯಲ್ಲ ಎಂದು ಪಾಟೀಲ್ ಅವರು ಸ್ಪಷ್ಟಪಡಿಸಿದರು. |