ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳಿಗೆ ಅನುದಾನ ಮತ್ತು ಅಭಿವೃದ್ಧಿ ವಿಷಯದಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುತ್ತಿದೆ ಎಂದು ಆರೋಪಿಸಿರುವ ಜೆಡಿಎಸ್ ಮಂಗಳವಾರ ಮುಖ್ಯಮಂತ್ರಿ ನಿವಾಸದ ಎದುರು ಬೃಹತ್ ಪ್ರತಿಭಟನೆ ನಡೆಸಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳಿಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಜಿಲ್ಲೆಗಳ ಅಭಿವೃದ್ದಿಗೆ ಅನುದಾನವಾಗಲಿ ಅಭಿವೃದ್ದಿ ಯೋಜನೆಯನ್ನು ಮಾಡಿಲ್ಲ. ಇನ್ನು ಮುಂದಾದರೂ ಈ ಜಿಲ್ಲೆಗಳ ಬಗ್ಗೆ ಗಮನಹರಿಸಿ ಅನುದಾನ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ವಕ್ತಾರ ವೈ.ಎಸ್.ವಿ. ದತ್ತ, ಮುಂದಿನ ದಿನಗಳಲ್ಲಿ ಈ ಆರು ಜಿಲ್ಲೆಗಳಿಗೆ ಅನುದಾನ ಬಿಡುಗಡೆ ಮಾಡದಿದ್ದರೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೈದರಾಬಾದ್ ಕರ್ನಾಟಕ ಜಿಲ್ಲೆಗಳಿಗೆ ಎಷ್ಟು ಅನುದಾನ ಬಿಡುಗಡೆ ಮಾಡಿದೆ ಮತ್ತು ತಮ್ಮ ತವರು ಜಿಲ್ಲೆಯಾದ ಶಿವಮೊಗ್ಗಕ್ಕೆ ಎಷ್ಟು ಅನುದಾನ ಬಿಡುಗಡೆ ಮಾಡಿದೆ ಎಂಬುದನ್ನು ಅಂಕಿ ಅಂಶಗಳ ಸಮೇತ ಬಿಡುಗಡೆಮಾಡಬೇಕೆಂದು ಅವರು ಆಗ್ರಹಿಸಿದರು. ಇಂಥಾ ತಾರತಮ್ಯ, ಮಲತಾಯಿ ಧೋರಣೆ ಮಾಡುವ ಮುಖ್ಯಮಂತ್ರಿಯನ್ನು ಹಿಂದೆಂದು ಕಂಡಿರಲಿಲ್ಲ ಎಂದು ತೀಕ್ಷ್ಣವಾಗಿ ಅವರು ಟೀಕಿಸಿದ್ದಾರೆ. |