ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಳ್ಳಾರಿ ಗಣಿಕುಳಗಳ ನಡುವೆ ತಲೆದೋರಿರುವ ಮುಸುಕಿನ ಗುದ್ದಾಟ ಇನ್ನೂ ಮುಂದುವರಿದಿದ್ದು, ಸೋಮವಾರ ರಾತ್ರಿ ರಹಸ್ಯ ಮಾತುಕತೆ ನಡೆದರೂ ಕೂಡ ಸಂಧಾನದ ಮಾತು ಫಲಪ್ರದವಾಗಿಲ್ಲ. ಗಣಿಧಣಿಗಳು ಸಚಿವೆ ಶೋಭಾ ಕರಂದ್ಲಾಜೆ, ಕಟ್ಟಾ ಸುಬ್ರಮಣ್ಯನಾಯ್ಡು ಸೇರಿ ಆರು ಪ್ರಮುಖ ಸಚಿವರು ಹಾಗೂ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್ ಅವರನ್ನು ಕೈಬಿಡುವಂತೆ ಮುಖ್ಯಮಂತ್ರಿಗಳಲ್ಲಿ ಬೇಡಿಕೆ ಇಟ್ಟಿದ್ದು, ಜೂನ್ 13ರವರೆಗೆ ಗಡುವು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ 13ರವರೆಗೆ ಬೇಡಿಕೆ ಈಡೇರದಿದ್ದರೆ ನಂತರ ತಮ್ಮ ಬೆಂಬಲಿಗ ಶಾಸಕರು, ಮುಖಂಡರೊಂದಿಗೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.ಸಚಿವರಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಬಿ.ಶ್ರೀರಾಮುಲು ಮುಖ್ಯಮಂತ್ರಿಗಳ ಜತೆ ರಹಸ್ಯ ಮಾತುಕತೆ ನಡೆಸಿದ್ದರಾದರೂ ಯಾವುದೇ ಖಚಿತ ಮಾಹಿತಿ ಬಹಿರಂಗಗೊಂಡಿಲ್ಲ. ಗಣಿಧಣಿಗಳ ಬೇಡಿಕೆ ಕೇಳಿದ ಯಡಿಯೂರಪ್ಪ ಅವರು, ಸಚಿವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಖಡಾಖಡಿಯಾಗಿ ತಿಳಿಸಿ, ಅಗತ್ಯ ಕಂಡು ಬಂದಲ್ಲಿ ಆರು ಜನರ ಪೈಕಿ ಒಂದಿಬ್ಬರ ಖಾತೆಗಳನ್ನು ಬದಲಾವಣೆ ಮಾಡುವ ಬಗ್ಗೆ ಆಲೋಚಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. |