ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಇರುವುದನ್ನು ಸ್ವತಃ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಮತ್ತೊಮ್ಮೆ ಬಹಿರಂಗಪಡಿಸುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ನಗರದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಏರ್ಪಡಿಸಿದ್ದ ದಲಿತರ ದತ್ತ ಸಮಾವೇಶದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಅವರು, ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಈ ವಿಷಯ ತಿಳಿಸಿದರು.
ಬಿಜೆಪಿಯ ರಾಜ್ಯ ಸಚಿವ ಸಂಪುಟದಲ್ಲಿ ಭಿನ್ನಮತ ಇರುವುದು ನಿಜ, ಇದರಿಂದಲೇ ಬಿಜೆಪಿಯಲ್ಲಿ ಹಲವಾರು ಬೆಳವಣಿಗೆಗಳಾಗುತ್ತಿವೆ ಎಂದು ಸ್ಪಷ್ಟಪಡಿಸಿದರು. ಸರ್ಕಾರದ ಸಚಿವ ಸಂಪುಟದಲ್ಲಿ ಭಿನ್ನಮತ ಇರುವುದರಿಂದಲೇ ಕೇಂದ್ರ ವರಿಷ್ಠರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದರು.
ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ವರಿಷ್ಠರ ಸಲಹೆ ಸೂಚನೆಗಳನ್ನು ಸ್ವೀಕರಿಸಿ ಅವರ ಆಣತಿಯಂತೆ ನಡೆಯಲಿದ್ದೇವೆ ಎಂದ ಅವರು, ಬಿಜೆಪಿ ದೊಡ್ಡ ಪಕ್ಷ ಹಾಗೂ ರಾಷ್ಟ್ರೀಯ ಪಕ್ಷ ಈ ಕಾರಣದಿಂದ ಭಿನ್ನಮತ ಸಹಜ. ಈ ಭಿನ್ನಮತ ಸಮಸ್ಯೆ ಬಗೆಹರಿಸಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು. |