ಸಾದರ ಲಿಂಗಾಯಿತ/ವೀರಶೈವ ಸಮುದಾಯವನ್ನು ಸರ್ಕಾರ ಏಕಾಏಕಿ 2(ಎ) ಪ್ರವರ್ಗಕ್ಕೆ ಸೇರಿಸಿರುವ ನಿಲುವನ್ನು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಸರ್ಕಾರದ ಈ ಕ್ರಮದಿಂದ ತೀವ್ರ ಅಸಮಾಧಾನಗೊಂಡಿರುವ ಹಿಂದುಳಿದ ವರ್ಗಗಳ ಆಯೋಗ ಈ ಆದೇಶವನ್ನು ಪಾಲಿಸದಿರುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿ ಹಿಂದುಳಿದ ವರ್ಗಗಳಿಂದ ಸಾರ್ವಜನಿಕ ವಿಚಾರಣೇ ನಡೆಸಲು ಮುಂದಾಗಿದೆ. ರಾಜ್ಯ ಸರ್ಕಾರ ಹೊರಡಿಸಿರುವ ಈ ಆದೇಶ ಸರಿಯಲ್ಲ. ಬಡವರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ. ಈ ಕುರಿತು ಜೂನ್ 16ರಂದು ಆಯೋಗ ಸಭೆ ನಡೆಸಿ ತೀರ್ಮಾನಿಸಲಿದೆ ಎಂದಿದೆ.
ಈ ಹೊಸ ಆದೇಶದ ಅನ್ವಯ ಯಾವುದಾದರು ನೇಮಕಾತಿ ನಡೆದಿದ್ದರೆ ಅದನ್ನು ರದ್ದು ಮಾಡುವಂತೆಯೂ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಲು ಸಹ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಿರ್ಧರಿಸಿದೆ. ಸರ್ಕಾರದ ಈ ನಿರ್ಧಾರ ಕಾನೂನು ಬಾಹಿರವಾಗಿದೆ. ಯಾವುದೇ ಕಾರಣಕ್ಕೂ ಲಿಂಗಾಯಿತ ಅಥವಾ ವೀರಶೈವರನ್ನು 2(ಎ) ಎಂದು ಪರಿಗಣಿಸಬಾರದೆಂದು ಜಿಲ್ಲಾಧಿಕಾರಿಗಳಿಗೆ ಆಯೋಗ ಆದೇಶ ನೀಡಲು ನಿರ್ಧರಿಸಿದೆ. ಈ ನಿರ್ಧಾರದಿಂದ ಸರ್ಕಾರ ಮತ್ತು ಆಯೋಗದ ನಡುವೆ ಗುದ್ದಾಟ ಆರಂಭವಾಗಿದೆ.
ರಾಜ್ಯ ಸರ್ಕಾರ ಹೊರಡಿಸಿರುವ ಈ ಆದೇಶದ ಪ್ರಕಾರ ಹಿಂದು ಲಿಂಗಾಯಿತ, ವೀರಶೈವ ಮತ್ತು ಅದರ ಎಲ್ಲಾ ಉಪಜಾತಿಗಳು ಪ್ರವರ್ಗ 3(ಬಿ) ಬದಲಾಗಿ ಪ್ರವರ್ಗ2(ಎ) ಸೇರಲಿದೆ. ಇದರಿಂದ ಶಾಲೆ ಕಾಲೇಜಿಗೆ ಸೇರುವ ವಿದ್ಯಾರ್ಥಿಗಳು ಪ್ರಮಾಣ ಪತ್ರವನ್ನು ಪಡೆಯಲು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನೂಕು ನುಗ್ಗಲು ಉಂಟಾಗಲಿದೆ ಎಂದು ದೂರಿದೆ. |