ವಾಯುವಿಹಾರಕ್ಕೆ ಹೋಗಿದ್ದ ಕೈಗಾ ಅಣು ಶಕ್ತಿ ಸ್ಥಾವರದ ವಿಜ್ಞಾನಿಯೊಬ್ಬರು ನಾಪತ್ತೆಯಾದ ಪ್ರಕರಣ ಇದೀಗ ತಡವಾಗಿ ಬೆಳಕಿಗೆ ಬಂದಿದ್ದು, ಅವರ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಕೈಗಾ ಸ್ಥಾವರಕ್ಕೆ ಸಂಬಂಧಪಟ್ಟ ಡಮ್ಮಿ ನಿಯಂತ್ರಣ ಕೊಠಡಿಯಲ್ಲಿ ಅಪ್ರೆಂಟಿಸ್ ಮತ್ತು ಹೊಸ ಉದ್ಯೋಗಿಗಳಿಗೆ ತರಬೇತಿ ನೀಡುತ್ತಿದ್ದ ಮಹಾಲಿಂಗಂ (47) ಎಂಬುವರು ಕಳೆದ ಸೋಮವಾರದಿಂದ ನಾಪತ್ತೆಯಾಗಿದ್ದಾರೆ. ಇವರು ಮೂಲತಃ ತಮಿಳುನಾಡಿನವರು, ಕೆಲ ವರ್ಷಗಳಿಂದ ಕೈಗಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರತಿದಿನದಂತೆ ಸೋಮವಾರ ಬೆಳಿಗ್ಗೆ ವಾಯುವಿಹಾರಕ್ಕೆ ಹೊರಟಿದ್ದ ಮಹಾಲಿಂಗಂ ಮತ್ತೆ ಮನೆಗೆ ವಾಪಸಾಗಿಲ್ಲವಾಗಿತ್ತು. ಸಾಕಷ್ಟು ಹುಡುಕಾಟ ನಡೆಸಿದ್ದರೂ ಕೂಡ ಪ್ರಯೋಜನವಾಗಿರಲಿಲ್ಲ. ಅವರ ಪತ್ನಿ ವಿನಾಯಕ ಸುಂದರಿ ಮಲ್ಲಾಪುರ ಠಾಣೆಗೆ ದೂರು ನೀಡಿದ್ದಾರೆ.
ಮಹಾಲಿಂಗಂ ನಾಪತ್ತೆಯಾಗಿ ಮೂರು ದಿನ ಕಳೆದರೂ ಈವರೆಗೂ ಪತ್ತೆಯಾಗಿಲ್ಲ, ಅವರನ್ನು ಅಪಹರಿಸಲಾಯಿತೇ? ವಾಯುವಿಹಾರಕ್ಕೆ ಹೊರಟವರು ಏನಾದರು ಎಂಬುದು ಕಗ್ಗಂಟಾಗಿ ಉಳಿದಿದೆ. ಪೊಲೀಸರು ಮಹಾಲಿಂಗಂ ಪತ್ತೆಗಾಗಿ ಶೋಧ ನಡೆಸುತ್ತಿರುವುದಾಗಿ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. |