ಆಡಳಿತಾರೂಢ ಭಾರತೀಯ ಜನತಾ ಪಕ್ಷದಲ್ಲಿನ ಭಿನ್ನಮತ ಭುಗಿಲೆದ್ದಿದ್ದು, ಗುರುವಾರ ನಡೆದ ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ರೆಡ್ಡಿ ಸಹೋದರರು ಹಾಗೂ ಅವರ ಬೆಂಬಲಿತ ಸಚಿವರು ಗೈರು ಹಾಜರಾಗಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಸಚಿವ ಸಂಪುಟದ ಸಭೆಗೆ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪನವರು ಪಂಚತಾರ ಹೋಟೆಲ್‌ನಲ್ಲಿ ತಮ್ಮ ಬೆಂಬಲಿತ ಸಚಿವರ ಸಭೆ ನಡೆಸಿ ಮುಂದಿನ ರಾಜಕೀಯ ಆಗು-ಹೋಗುಗಳ ಬಗ್ಗೆ ಚರ್ಚೆ ನಡೆಸಿದರು.
ಯಡಿಯೂರಪ್ಪ ಕರೆದಿದ್ದ ಸಭೆಗೆ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಭಾಗವಹಿಸಿದ್ದು ವಿಶೇಷವಾಗಿತ್ತು. ಆದರೆ ಕಂದಾಯ ಸಚಿವ ಕರುಣಾಕರ ರೆಡ್ಡಿ ಅವರ ಸಹೋದರ ಸಚಿವ ಜನಾರ್ದನ ರೆಡ್ಡಿ, ಆರೋಗ್ಯ ಸಚಿವ ಶ್ರೀರಾಮುಲು, ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ, ಗ್ರಂಥಾಲಯ ಸಚಿವ ಶಿವನಗೌಡ ನಾಯಕ ಮತ್ತು ಬಂದರು ಮತ್ತು ವಿಜ್ಞಾನ ಖಾತೆ ಸಚಿವ ಅಸ್ನೋಟಿಕರ್ ಅವರು ಸಭೆಗೆ ಗೈರು ಹಾಜರಾಗಿದ್ದರು.
ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್ ಅವರನ್ನು ಬದಲಾಯಿಸಬೇಕು, ಅಲ್ಲದೇ ಕಟ್ಟಾ ಸುಬ್ರಹ್ಮಣ್ಯನಾಯ್ಡು, ಸಿ.ಎಂ.ಉದಾಸಿ, ಶೋಭ ಕರಂದ್ಲಾಜೆ, ಮುರುಗೇಶ್ ನಿರಾಣಿ, ಬಸವರಾಜ ಬೊಮ್ಮಾಯಿ ಅವರನ್ನು ಸಂಪುಟದಿಂದ ಕೈಬಿಡಬೇಕೆಂಬ ಬಳ್ಳಾರಿ ಗಣಿ ಧಣಿಗಳ ಬೇಡಿಕೆಗೆ ಮುಖ್ಯಮಂತ್ರಿಗಳು ಕಿವಿಗೊಡದಿರುವುದೇ ಈ ಆರು ಮಂದಿ ಸಚಿವರು ಸಚಿವ ಸಂಪುಟ ಸಭೆಗೆ ಗೈರುಹಾಜರಾಗಲು ಕಾರಣ ಎಂದು ಬಲ್ಲ ಮೂಲಗಳು ತಿಳಿಸಿವೆ. |