ರಾಜ್ಯ ರಾಜಕಾರಣದಲ್ಲಿ ಭಿನ್ನಮತದ ಕಿಡಿಹೊತ್ತಿಸಿ ಸುದ್ದಿಮಾಡುತ್ತಿರುವ ಬಳ್ಳಾರಿ ಗಣಿಧಣಿಗಳಲ್ಲಿ ಒಬ್ಬರಾದ ಸಚಿವ ಜನಾರ್ದನ ರೆಡ್ಡಿಯವರು ತಿರುಪತಿ ತಿಮ್ಮಪ್ಪನಿಗೆ ಗುರುವಾರ ವಜ್ರದ ಖಚಿತ ಕಿರೀಟವನ್ನು ಕಾಣಿಕೆಯಾಗಿ ನೀಡಿದ್ದು, ಇದರ ಬೆಲೆ 45ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ!ಹಾಂ ಅಂತ ಹುಬ್ಬೇರಿಸಬೇಡಿ, ಇದು ಅಕ್ಷರಶ ನಿಜ. ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರನಿಗೆ ಗಾಲಿ ಜನಾರ್ದನ ರೆಡ್ಡಿ ಅವರು ತಮ್ಮ ಅಳಿಲು ಸೇವೆ ಎಂಬಂತೆ ಸುಮಾರು 45ಕೋಟಿ ರೂ.ಗಳ ವೆಚ್ಚದಲ್ಲಿ ವಜ್ರ, ಹವಳ, ಮುತ್ತುಗಳಿಂದ ನಿರ್ಮಿಸಿರುವ ಕಿರೀಟವನ್ನು ಇಂದು ಪತ್ನಿ ಸಮೇತರಾಗಿ ಅರ್ಪಿಸಿದರು.45 ಕೋಟಿಗಳ ರೂ.ಗಳ ಮೌಲ್ಯದ ಈ ವಜ್ರಕಿರೀಟವನ್ನು ತಯಾರಿಸಲು, ಅದರಲ್ಲಿ ನಿಷ್ಣಾತರಾದ ಕಾರ್ಮಿಕರು 9ತಿಂಗಳ ಕಾಲಾವಕಾಶ ತೆಗೆದುಕೊಳ್ಳಲಾಗಿದೆ. ತಿರುಪತಿ ತಮ್ಮಪ್ಪನ ದಯೆ, ಆಶೀರ್ವಾದಗಳಿಂದ ತಮ್ಮ ವ್ಯಾಪಾರ, ವ್ಯವಹಾರ, ಕೆಲಸಗಳೆಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಆಂಧ್ರದ ಕಡಪದಲ್ಲಿ ನಿರ್ಮಿಸುತ್ತಿರುವ ಸಹಸ್ರಾರು ಕೋಟಿ ರೂ.ಗಳ ವೆಚ್ಚದ ಬ್ರಹ್ಮಿಣಿ ಉಕ್ಕು ಕಾರ್ಖಾನೆಯ ಕಾಮಗಾರಿಕೆಯೂ ಸಹ ಸಮರ್ಪಕವಾಗಿ ನಡೆಯುತ್ತಿರುವುದರಿಂದ ರೆಡ್ಡಿ ಕುಟುಂಬ ಈ ಕಾಣಿಕೆಯನ್ನು ಅಳಿಲು ಸೇವೆಯನ್ನು ಭಕ್ತಿ ಪೂರ್ವಕವಾಗಿ ಸಮರ್ಪಿಸಲಿದೆ ಎಂದು ಹೇಳಲಾಗಿದೆ.ಎಲ್ಲವೂ ನಿರೀಕ್ಷೆಯಂತೆ ನಡೆದರೆ 2010ರ ವೇಳೆಗೆ ಬ್ರಹ್ಮಿಣಿ ಸ್ಟೀಲ್ಸ್ ಕಾರ್ಖಾನೆಯ ಉತ್ಪಾದನೆಯನ್ನು ಪ್ರಾರಂಭಿಸಲಿದೆ ಎಂದು ಹೇಳಲಾಗಿದೆ. |