ಭಾರತೀಯ ಜನತಾ ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಭಿಪ್ರಾಯ ತಲೆದೋರಿಲ್ಲ ಎಂದು ತಿಳಿಸಿರುವ ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ, ಪಕ್ಷದ ವರಿಷ್ಠ ಅರುಣ್ ಜೇಟ್ಲಿ ಅವರ ಭೇಟಿ ಔಪಚಾರಿಕವಾದದ್ದು ಎಂದು ತಿಪ್ಪೆ ಸಾರಿದ್ದಾರೆ.ನಗರದ ಪಂಚತಾರಾ ಹೊಟೇಲ್‌ನಲ್ಲಿ ಮೊದಲಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಬೆಂಬಲಿಗ ಸಚಿವರನ್ನು ಕರೆಸಿಕೊಂಡು ಜೇಟ್ಲಿ ಮಾತುಕತೆ ನಡೆಸಿದರು. ನಂತರ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಅವರ ಗುಂಪಿನ ಸದಸ್ಯರೊಂದಿಗೆ ಮೂರುವರೆ ಗಂಟೆ ಕಾಲ ಸಮಾಲೋಚನೆ ನಡೆಸಿದ್ದರು. ರಾತ್ರಿ ಎರಡೂ ಬಣಗಳನ್ನು ಒಟ್ಟಿಗೆ ಸೇರಿಸಿ ಸಭೆ ನಡೆಸಿದರು. ಆದರೆ ಈ ಸಂಧಾನ ಪ್ರಕ್ರಿಯೆಯಿಂದ ಬಳ್ಳಾರಿ ಗಣಿಧಣಿಗಳು ದೂರ ಉಳಿದಿದ್ದರು.ಮುಖ್ಯಮಂತ್ರಿ ಮತ್ತು ಹಿರಿಯ ಮುಖಂಡರ ನಡುವೆ ಭಿನ್ನಮತ ತಾರಕ್ಕೇರಿ, ಜೇಟ್ಲಿ ಸಾರಥ್ಯದಲ್ಲಿ ಒಡಕು ಮುಚ್ಚಲು ಹರಸಾಹಸ ಪಡುತ್ತಿದ್ದರೂ ಕೂಡ, ಸದಾನಂದ ಗೌಡರು, ಬಿಜೆಪಿಯಲ್ಲಿ ಭಿನ್ನಮತ ಇಲ್ಲ, ಜೇಟ್ಲಿ ಅವರು ಔಪಚಾರಿಕವಾಗಿ ಭೇಟಿ ನೀಡಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದರು.ಗುರುವಾರ ಮಧ್ನಾಹ್ನ ನಗರಕ್ಕೆ ದಿಢೀರ್ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ ಅವರು ಭಿನ್ನಮತ ಶಮನದ ಪ್ರಯತ್ನಗಳನ್ನು ಪ್ರಾರಂಭಿಸಿದ್ದರು. ಭಿನ್ನಮತ ಪರಿಹಾರಕ್ಕೆ ಜೇಟ್ಲಿ ಬರುವ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ವಿ.ಧನಂಜಯ್ ಕುಮಾರ್ ಬುಧವಾರವಷ್ಟೇ ಹೇಳಿಕೆ ನೀಡಿದ್ದರು. ಭಿನ್ನಮತ ಶಮನಕ್ಕೆ ಜೇಟ್ಲಿ ಬರಬೇಕು, ಬರುವುದರಲ್ಲಿ ತಪ್ಪೇನಿಲ್ಲ ಎಂದು ಹಿರಿಯ ಸಚಿವ ಈಶ್ವರಪ್ಪ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದರು. |