ಕೈಗಾ ಅಣು ವಿದ್ಯುತ್ ಸ್ಥಾವರದ ಅಣು ವಿಜ್ಞಾನಿ 48ರ ಹರೆಯದ ಲೋಕನಾಥನ್ ಮಹಾಲಿಂಗಂ ಅವರು ಸೋಮವಾರವೇ ನಿಗೂಢವಾಗಿ ನಾಪತ್ತೆಯಾಗಿದ್ದ, ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಇದು ಆತಂಕದ ಜೊತೆಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಎಂದಿನಂತೆ ಮಹಾಲಿಂಗಂ ಅವರು ಜೂನ್ 8ರ ಸಂಜೆ 5.30ರ ಸುಮಾರಿಗೆ ವಾಯುವಿಹಾರಕ್ಕೆ ಹೋಗಿದ್ದರು. ಆದರೆ ಮಾಮೂಲಿ ಸಮಯಕ್ಕೆ ಆಗಮಿಸುತ್ತಿದ್ದ ಅವರು ಮನೆಗೆ ವಾಪಸಾಗದಿದ್ದಾಗ ಮನೆಯವರು ಆತಂಕಗೊಂಡು ಪೊಲೀಸರಿಗೆ ದೂರು ನೀಡಿದ್ದರು. ಕೈಗಾ ಅಣು ವಿದ್ಯುತ್ ಸ್ಥಾವರದ ವಿಜ್ಞಾನಿಯಾಗಿರುವ ಮಹಾಲಿಂಗಂ ನಾಪತ್ತೆ ಪ್ರಕರಣವನ್ನು ಪೊಲೀಸರು ರಹಸ್ಯವಾಗಿಟ್ಟು ಶೋಧ ಕಾರ್ಯ ನಡೆಸಿದ್ದರು. ಆದರೆ ಇದೀಗ ವಿಷಯ ಬಹಿರಂಗಗೊಂಡಿದ್ದು, ಸ್ಥಳೀಯ ಪೊಲೀಸರ ಜತೆ ಐಬಿ ಕೂಡ ಕೈಜೋಡಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ವಿಜ್ಞಾನಿ ಮಹಾಲಿಂಗಂ ಅವರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಯಾವುದೇ ಮಾಹಿತಿಯೂ ಇಲ್ಲ ಎಂದು ಕೈಗಾ ಪ್ಲ್ಯಾಂಟ್ ನಿರ್ದೇಶಕ ಸಾಂತ್ ಕುಮಾರ್ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.
ಈ ಹಿಂದೆ ಹೀಗೆ ನಾಪತ್ತೆ!: ಏಕಾಏಕಿ ಕಣ್ಮೆರೆಯಾಗಿರುವ ವಿಜ್ಞಾನಿ ಮಹಾಲಿಂಗಂ ಪ್ರಕರಣ ಮನೆಯವರಿಗೆ, ಕೈಗಾ ಮಂಡಳಿಗೆ ಆತಂಕ ಮೂಡಿಸಿದ್ದರೆ, ಈ ಮೊದಲು ಒಮ್ಮೆ ಹೀಗೆ ನಾಪತ್ತೆಯಾಗಿದ್ದರು ಎಂದು ಅವರ ಸಹೋದ್ಯೋಗಿಯೊಬ್ಬರು ಟೈಮ್ಸ್‌ಗೆ ವಿವರಿಸಿದ್ದಾರೆ.
ಸುಮಾರು ಹತ್ತು ವರ್ಷಗಳ ಹಿಂದೆ ತಮಿಳುನಾಡಿನ ಕಲ್ಪಾಕ್ಕಂ ಅಣು ಕೇಂದ್ರದಲ್ಲಿ ಮಹಾಲಿಂಗಂ ಅವರು ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಐದು ದಿನಗಳ ಕಾಲ ನಿಗೂಢವಾಗಿ ನಾಪತ್ತೆಯಾಗಿದ್ದರು. ಬಳಿಕ ಮಹಾಲಿಂಗಂ ಅವರೇ ವಾಪಸಾಗಿದ್ದರು. ತಾನು ಆಧ್ಯಾತ್ಮಿಕವಾಗಿ ನೆಮ್ಮದಿ ಪಡೆಯಲು ತೆರಳಿರುವುದಾಗಿ ಸ್ಪಷ್ಟನೆ ನೀಡಿದ್ದರು.
ಈ ಬಾರಿಯೂ ಕೂಡ ಮಹಾಲಿಂಗಂ ಅವರು ಅದೇ ರೀತಿ ನಾಪತ್ತೆಯಾಗಿರಬಹುದು ಎಂದು ಅವರ ಸಹೋದ್ಯೋಗಿಯೊಬ್ಬರು ಶಂಕಿಸಿದ್ದಾರೆ. ಆ ನಿಟ್ಟಿನಲ್ಲಿ ತಿರುಪತಿ, ಧರ್ಮಸ್ಥಳ ಹಾಗೂ ಇನ್ನಿತರ ಧಾರ್ಮಿಕ ಕ್ಷೇತ್ರಗಳಲ್ಲಿ ಮಹಾಲಿಂಗಂ ಹುಡುಕಾಟಕ್ಕಾಗಿ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. |