ಮೋರಿ ನೀರಿನಲ್ಲಿ ಕೊಚ್ಚಿ ಹೋದ ಬಾಲಕ ಅಭಿಷೇಕ್ ಮೃತದೇಹ ಪತ್ತೆ ಕುರಿತಂತೆ ಬಿಬಿಎಂಪಿ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಮಾತನಾಡಿದ್ದ ಲೋಕಾಯುಕ್ತ ಸಂತೋಷ್ ಹೆಗ್ಡೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಹೋಗಿ ವಿವಾದಕ್ಕೆ ಕಾರಣರಾಗಿದ್ದ ಆಯುಕ್ತ ಡಾ. ಸುಬ್ರಹ್ಮಣ್ಯ ಅವರನ್ನು ಎತ್ತಂಗಡಿ ಮಾಡಲು ಸರ್ಕಾರ ನಿರ್ಧರಿಸಿದೆ.
ಸಾರ್ವಜನಿಕವಾಗಿ ತನ್ನ ಮರ್ಯಾದೆ ಹೋಯಿತು ಎಂದು ಲೋಕಾಯುಕ್ತ ಹೆಗ್ಡೆಯವರ ವಿರುದ್ಧವೇ ಸಮರ ಸಾರಿ ಮೊಕದ್ದಮೆ ಹೂಡಿದ್ದ ಬಿಬಿಎಂಪಿ ಆಯುಕ್ತ ಸುಬ್ರಹ್ಮಣ್ಯ ಅವರ ತಲೆದಂಡವನ್ನು ಸರ್ಕಾರ ತೆಗೆದುಕೊಂಡಿದೆ. ಅವರ ಸ್ಥಾನಕ್ಕೆ ಭರತ್‌ಲಾಲ್ ಮೀನಾ ಅವರನ್ನು ನಿಯೋಜಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
5ರ ಹರೆಯದ ಬಾಲಕ ಅಭಿಷೇಕ್ ಭಾರೀ ಮಳೆಯಿಂದಾಗಿ ಲಿಂಗರಾಜಪುರ ಮೋರಿ ನೀರಿನಲ್ಲಿ ಕೊಚ್ಚಿ ಹೋಗಿದ್ದ, ಆರಂಭದಲ್ಲಿ ಬಿಬಿಎಂಪಿ, ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹುಡುಕಾಡಿದ್ದರು ಕೂಡ ಅಭಿಷೇಕ್ ಮೃತದೇಹ ಪತ್ತೆಯಾಗಿಲ್ಲವಾಗಿತ್ತು. ಈ ಬಗ್ಗೆ ಸಾರ್ವಜನಿಕರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದರು.
ಬಳಿಕ ಬಾಲಕ ಅಭಿಷೇಕ್ ಕುಟುಂಬಕ್ಕೆ ಭೇಟಿ ನೀಡಿದ್ದ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಬಿಬಿಎಂಪಿ ಆಯುಕ್ತ ಸುಬ್ರಹ್ಮಣ್ಯ ಹಾಗೂ ಕಾರ್ಯವೈಖರಿ ಬಗ್ಗೆ ಖಾಸಗಿ ಚಾನೆಲ್‌ವೊಂದರ ಜತೆ ಮಾತನಾಡುತ್ತ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದಾಗಿ ತನ್ನ ಮಾನಹಾನಿಯಾಗಿದೆ ಎಂದು ದೂರಿ ಆಯುಕ್ತ ಸುಬ್ರಹ್ಮಣ್ಯ ಅವರು ಲೋಕಾಯುಕ್ತರ ವಿರುದ್ಧವೇ ಮಾನನಷ್ಟ ಮೊಕದ್ದಮೆ ಹೂಡಿದ್ದರು. ತದನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಧ್ಯಸ್ಥಿಕೆಯಿಂದ ಸುಬ್ರಹ್ಮಣ್ಯ ಅವರು ಮಾನನಷ್ಟು ಮೂಕದ್ದಮೆಯನ್ನು ವಾಪಸ್ ಪಡೆದುಕೊಂಡಿದ್ದರು. |