ಕಾರವಾರ ಕೈಗಾ ಅಣು ಸ್ಥಾವರದ ವಿಜ್ಞಾನಿ ಮಹಾಲಿಂಗಂ ಅವರ ಶೋಧ ಕಾರ್ಯ ಶುಕ್ರವಾರ ಕೂಡ ಮುಂದುವರಿದಿದೆ ಎಂದು ಭಾರತೀಯ ಅಣುಶಕ್ತಿ ನಿಗಮ ತಿಳಿಸಿದೆ.
ಭಾರತೀಯ ಅಣುಶಕ್ತಿ ನಿಗಮದ ಅಧ್ಯಕ್ಷ ಸಿ.ನಾಗೇಶ್ವರ್ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಸೋಮವಾರದಿಂದ ನಿಗೂಢವಾಗಿ ನಾಪತ್ತೆಯಾಗಿರುವ ವಿಜ್ಞಾನಿ ಮಹಾಲಿಂಗಂ ಬಳಿ ಯಾವುದೇ ರಹಸ್ಯ ದಾಖಲೆಗಳು ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಯಾವುದೇ ಪ್ರಮುಖ ಅಣು ತಂತ್ರಜ್ಞಾನ ಮಾಹಿತಿ ಸೋರಿಕೆಯೂ ಆಗಿಲ್ಲ ಅಂತಹ ಗಾಬರಿ ಬೇಡ ಎಂದು ಈ ಸಂದರ್ಭದಲ್ಲಿ ಹೇಳಿದರು.
ಜೂನ್ 8ರಂದು ಮನೆಯಿಂದ ಹೊರಗೆ ವಾಯುವಿಹಾರಕ್ಕೆ ಹೊರಟಿದ್ದ ಮಹಾಲಿಂಗಂ ಅವರು ನಿಗೂಢವಾಗಿ ನಾಪತ್ತೆಯಾಗಿದ್ದರು. ಅವರ ಪತ್ತೆಗಾಗಿ ಸಿಐಎಸ್‌ಎಫ್, ಅರಣ್ಯ ಹಾಗೂ ಪೊಲೀಸ್ ಸೇರಿ ಮೂರು ತಂಡಗಳನ್ನು ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಮಣ್ ಗುಪ್ತಾ ವಿವರಿಸಿದರು.
ಕೈಗಾದಲ್ಲಿ ಪ್ರಮುಖ ವಿಜ್ಞಾನಿಯಾಗಿರುವ ಮಹಾಲಿಂಗಂ ಅವರನ್ನು ದುಷ್ಕರ್ಮಿಗಳು ಅಪಹರಿಸಿದ್ದರು, ಅವರ ಬಳಿ ಪ್ರಮುಖ ರಹಸ್ಯ ದಾಖಲೆಗಳಿದ್ದವು ಎಂಬೆಲ್ಲಾ ಊಹಾಪೋಹಗಳು ಹಬ್ಬಿದ್ದವು, ಇದೀಗ ಅಣುಶಕ್ತಿ ನಿಗಮದ ಅಧ್ಯಕ್ಷ ನಾಗೇಶ್ವರ್ ಅವರೇ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. |