ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ತಮ್ಮ ರಾಗ ಬದಲಿಸಿದ್ದು, ತಮ್ಮ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಡಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಗರದ ಅಭಿವೃದ್ಧಿ ವಿಷಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಅಸಮಾಧಾನ ಹೊಂದಿದ್ದು ನಿಜ. ಆದರೆ ಮೊನ್ನೆಯಷ್ಟೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿದ ನಂತರ ಸಮಾಧಾನವಾಗಿದೆ. ಈಗ ಯಾವುದೇ ಭಿನ್ನಮತ ಇಲ್ಲ. ಇದೆಲ್ಲಾ ಊಹಾಪೋಹಾ ಅಷ್ಟೆ. ನಮ್ಮ ಮಾತುಕತೆಯೂ ಯಶಸ್ವಿಯಾಗಿದೆ ಎಂದು ತಾವೇ ಸಮಾಧಾನ ಹೇಳಿಕೊಂಡಿದ್ದಾರೆ.
ನಗರದ ಮಹಾನಗರ ಪಾಲಿಕೆಯ ಆಯವ್ಯಯದಲ್ಲಿ ಮೀಸಲಿರಿಸಿದ್ದ 100 ಕೋಟಿ ರೂ.ನಲ್ಲಿ 17 ಕೋಟಿ ರೂ. ಮಾತ್ರ ಬಿಡುಗಡೆಯಾಗಿತ್ತು. ಈ ಸಂಬಂಧ ಸ್ವಲ್ಪ ಚರ್ಚೆಯಾಗಿತ್ತು. ಅದನ್ನು ಹೊರತುಪಡಿಸಿದರೆ ಬೇರಾವ ಭಿನ್ನಮತ ನಮ್ಮಿಬ್ಬರ ನಡುವೆ ಇಲ್ಲ. ನಗರದ ಜನತೆಗೆ ಸರ್ಮಪಕವಾಗಿ ಕುಡಿಯುವ ನೀರು ಒದಗಿಸುವ ಯೋಜನೆಯ ಮಂಜೂರಾತಿಗೂ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ ಗುರುವಾರ ಪಕ್ಷದ ವರಿಷ್ಠರಾದ ಅರುಣ್ ಜೇಟ್ಲಿ ಭೇಟಿ ನೀಡಿ ಭಿನ್ನಮತ ಶಮನಕ್ಕೆ ಪ್ರಯತ್ನಿಸಿದ್ದಾರೆ, ಆದರೆ ಬಳ್ಳಾರಿ ಗಣಿಧಣಿಗಳು ಗೈರು ಹಾಜರಾಗುವ ಮೂಲಕ ತಮ್ಮ ಅಸಮಾಧಾನ ಮುಂದುವರಿಸಿದ್ದರು. ಸೋಜಿಗ ಎಂಬಂತೆ ಮುಖ್ಯಮಂತ್ರಿಗಳು ಅವರನ್ನು ಕ್ಯಾರೇ ಮಾಡದಿದ್ದ ಪರಿಣಾ ರೆಡ್ಡಿ ಸೋಹದರರು ಇದೀಗ ತೆಪ್ಪಗಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜ್ಯದ ದೆಹಲಿ ಪ್ರತಿನಿಧಿ ಧನಂಜಯ್ ಕುಮಾರ್ ಅವರು ತಾವು ಮುಖ್ಯಮಂತ್ರಿಗಳೊಂದಿಗೆ ಅಸಮಾಧಾನಗೊಂಡಿದ್ದ ಕುರಿತು ನೀಡಿರುವ ಹೇಳಿಕೆ ಸರಿಯಲ್ಲ. ತಾವು ಅಭಿವೃದ್ಧಿ ವಿಷಯದಲ್ಲಿ ಮುಖ್ಯಮಂತ್ರಿಗಳೊಂದಿಗೆ ಮುನಿಸಿಕೊಂಡಿದ್ದು ನಿಜ. ಅವರು ಬಳ್ಳಾರಿ ನಗರದ ಸ್ಥಿತಿ ಗತಿ ಬಗ್ಗೆ ಅರಿತು ಮಾತನಾಡಲಿ. ಬೇಕಾದರೆ ಒಮ್ಮೆ ಬಳ್ಳಾರಿಗೆ ಭೇಟಿಕೊಡಲಿ ಎಂದು ಸಲಹೆ ನೀಡಿದರು. |