ಪಕ್ಷದ ಹಿರಿಯ ಮುಖಂಡರು ಶಿಸ್ತನ್ನು ಕಾಪಾಡಿಕೊಂಡು ಸಮನ್ವಯತೆಯಿಂದ ಕೆಲಸ ಮಾಡುವಂತೆ ಬಿಜೆಪಿ ವರಿಷ್ಠ ಅರುಣ್ ಜೇಟ್ಲಿ ಸೂಚನೆ ನೀಡಿ ದೆಹಲಿಗೆ ತೆರಳಿದ್ದಾರೆ.
ಪಕ್ಷದಲ್ಲಿ ಹೇಳಿಕೊಳ್ಳುವ ಯಾವುದೇ ಭಿನ್ನಮತ ಇಲ್ಲ, ಕೆಲವು ಸಣ್ಣಪುಟ್ಟ ವ್ಯತ್ಯಾಸಗಳಿದ್ದು ಅವುಗಳನ್ನು ಪರಸ್ಪರ ಸಮಾಲೋಚನೆ ಮೂಲಕ ಬಗೆಹರಿಸಿಕೊಳ್ಳುವಂತೆ ಮುಖಂಡರಿಗೆ ಹೇಳಿರುವುದಾಗಿ ಅವರು ತಿಳಿಸಿದರು.
ರಾಜ್ಯದ ಆಡಳಿತಾರೂಢ ಬಿಜೆಪಿಯಲ್ಲಿ ತಲೆದೋರಿದ್ದ ಭಿನ್ನಮತ ಶಮನಕ್ಕೆ ಗುರುವಾರ ಮಧ್ನಾಹ್ನ ಜೇಟ್ಲಿ ದಿಢೀರ್ ಭೇಟಿ ನೀಡಿ, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು, ಸಂಸದರು, ಶಾಸಕರು ಹಾಗೂ ಮುಖಂಡರ ಜತೆ ಸಮಾಲೋಚನೆ ನಡೆಸಿದ್ದರು. ನಂತರ ದೆಹಲಿಗೆ ವಾಪಸ್ ಆಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಕ್ಷದ ಮುಖಂಡರ ಜೊತೆ ತೀವ್ರ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಯಾರು ಯಾರ ಮೇಲೂ ದೂರು ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದ ಜೇಟ್ಲಿ, ಹಾಗೆಯೇ ಯಾರು ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಹೇಳಿದರು. |