ಇದೊಂದು ಅಪರೂಪದ ಘಟನೆ, ಬಲವಂತದ ಮದುವೆಗೆ ಒಪ್ಪದ ಅಪ್ರಾಪ್ತ ವಯಸ್ಸಿನ ಹೆಣ್ಣು ಮಗಳು ಮುಹೂರ್ತದ ಸಮಯಕ್ಕೆ ಪ್ರತಿಭಟನೆ ನಡೆಸಿ ವಿವಾಹ ವೇದಿಕೆಯಿಂದ ಹೊರನಡೆದ ಘಟನೆ ಶುಕ್ರವಾರ ನಡೆದಿದೆ.ಸಮಾನ ಮನಸ್ಕರ ಒಕ್ಕೂಟ ಕೆಂಗೇರಿಯಲ್ಲಿ ಶುಕ್ರವಾರ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡಿತ್ತು. ಈ ಸಮಾರಂಭದಲ್ಲಿ ಕನಕಪುರ ತಾಲೂಕಿನ ನಾರಾಯಣಪುರದ ನಿವಾಸಿ ಲಕ್ಷ್ಮಿ(16) ಪೋಷಕರ ಬಲವಂತದ ವಿವಾಹವನ್ನು ವಿರೋಧಿಸಿ ಹೊರನಡೆದ ಘಟನೆ ನಡೆಯಿತು.ಘಟನೆ ವಿವರ: ಹದಿನಾರರ ಬಾಲೆ ಲಕ್ಷ್ಮಿ ದೊಡ್ಡ ಬ್ಯಾಲಾಳು ಗ್ರಾಮದ ಸ್ವಾಮಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಲಕ್ಷ್ಮಿ ರಾಮಸ್ವಾಮಿ ಜತೆ ಹಸೆಮಣೆ ಏರುವಂತೆ ಪೋಷಕರು ಒತ್ತಡ ಹೇರಿದ್ದರು. ಏಕೆಂದರೆ ಲಕ್ಷ್ಮಿಯ ಸಹೋದರ ಹಾಗೂ ರಾಮಸ್ವಾಮಿಯ ತಂಗಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ಇದೇ ವೇದಿಕೆಯಲ್ಲಿ ಅವರು ಮದುವೆಯಾದರು. ಆದರೆ ಲಕ್ಷ್ಮಿ ತನಗೆ ಇಷ್ಟವಿಲ್ಲದ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಳು.ಷೋಷಕರು ಲಕ್ಷ್ಮಿಯನ್ನು ಬಲವಂತವಾಗಿ ಒಪ್ಪಿಸಿ ಸಾಮೂಹಿಕ ವಿವಾಹಕ್ಕೆ ಕರೆತಂದಿದ್ದರು. ಮುಹೂರ್ತ ಸಮಯದಲ್ಲಿ ಮಾಂಗಲ್ಯ ಧಾರಣೆ ಮಾಡುವಂತೆ ಆಯೋಜಕರು ಪ್ರಕಟಿಸುತ್ತಿದ್ದಂತೆ ಲಕ್ಷ್ಮಿ ಅಲ್ಲಿಂದ ಎದ್ದು ನಿಂತ, ಈ ಮದುವೆ ತನಗೆ ಇಷ್ಟ ಇಲ್ಲ ಎಂದು ಬೊಬ್ಬಿಟ್ಟಳು. ಇದರಿಂದಾಗಿ ಕೆಲ ಕಾಲ ಗೊಂದಲ ಉಂಟಾಗಿ, ಮಾಲೆ, ಮಾಂಗಲ್ಯ ಹಿಡಿದು ನಿಂತಿದ್ದ ರಾಮಸ್ವಾಮಿ ಕೂಡ ಕಂಗಾಲು!ಲಕ್ಷ್ಮಿಯ ಈ ನಿಲುವಿನಿಂದ ಪೋಷಕರು ಎಳೆದಾಡಿ ರಂಪಾಟ ಮಾಡುವ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಸಮಾಧಾನ ಮಾಡಿದರು. ನಂತರ ಆಕೆಯನ್ನು ಪೋಷಕರೊಂದಿಗೆ ಕಳುಹಿಸಿಕೊಟ್ಟರು. |